ಮೋದಿಗೆ ಅಂಬೇಡ್ಕರ್‌ ಬಗ್ಗೆ ಕಿಂಚಿತ್ತು ಗೌರವ ಇದ್ದರೂ ಅಮಿತ್‌ ಶಾರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು: ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ಮೋದಿಗೆ ಅಂಬೇಡ್ಕರ್‌ ಬಗ್ಗೆ ಕಿಂಚಿತ್ತು ಗೌರವ ಇದ್ದರೂ ಅಮಿತ್‌ ಶಾರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು: ಮಲ್ಲಿಕಾರ್ಜುನ ಖರ್ಗೆ ಒತ್ತಾಯ

 

ದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ತಮ್ಮ ಸ್ಥಾನದಿಂದ ಕೂಡಲೇ ಕೆಳಗಿಳಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯಸಭೆಯಲ್ಲಿ ಮಂಗಳವಾರ ಅಮಿತ್ ಶಾ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ''ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಲಾಗಿದೆ. ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಮನುಸ್ಮೃತಿಯ ಯೋಚನೆಯು ಪ್ರಧಾನಿ ಮೋದಿಯವರ ಸರಕಾರದ್ದಾಗಿದೆ. ಅಮಿತ್‌ ಶಾ ಅವರನ್ನು ಪ್ರಧಾನಿ ಮೋದಿಯವರು ತಡೆಯಬೇಕು. ಅಮಿತ್‌ ಶಾರ ಪಾಪಗಳಿಗೆ ಪ್ರಧಾನಿ ಮೋದಿಯವರು ಸಾಥ್‌ ಕೊಡುತ್ತಾರೆ. ಮೋದಿಯವರ ಪಾಪಗಳಿಗೆ ಅಮಿತ್‌ ಶಾ ಬೆಂಬಲ ಕೊಡುತ್ತಾರೆ. ಪವಿತ್ರವಾದ ಸಂವಿಧಾನದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮ್‌ ಲೀಲಾ ಮೈದಾನದಲ್ಲಿ ಸಂವಿಧಾನವನ್ನು ಸುಟ್ಟವರು ಅವರು. ಸಂವಿಧಾನವನ್ನು ಅವರು ಒಪ್ಪುವುದೇ ಇಲ್ಲ. ನೆಹರೂ, ಗಾಂಧಿ ಹಾಗೂ ಅಂಬೇಡ್ಕರ್‌ ಅವರ ಫೋಟೋಗಳನ್ನು ಸುಟ್ಟರು. ತ್ರಿವರ್ಣ ಧ್ವಜವನ್ನು ತಿರಸ್ಕರಿಸಿದರು. ಈಗ ಅಂಬೇಡ್ಕರ್‌ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಅಭಿಮಾನ ಇದ್ದಿದ್ದರೆ, ಇಂಥ ಮಾತುಗಳು ಅವರಿಂದ ಬರುತ್ತಿರಲಿಲ್ಲ. ಮೋದಿಯವರಿಗೆ ಅಂಬೇಡ್ಕರ್‌ ಬಗ್ಗೆ ಕಿಂಚಿತ್ತು ಗೌರವ ಇದ್ದರೂ ಅಮಿತ್‌ ಶಾ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಅಂಬೇಡ್ಕರ್‌ ಅವರ ಬಗ್ಗೆಯ ಮಾತು ಯಾವುದೇ ಜಾತಿಗೆ ಸಂಬಂಧಿಸಿದ್ದಲ್ಲ, ಎಲ್ಲ ವರ್ಗದವರಿಗೂ ಸೇರಿದವರು ಅಂಬೇಡ್ಕರ್‌. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಅಮಿತ್‌ ಶಾರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು. ಇಲ್ಲವಾದರೆ, ಸಂವಿಧಾನ, ಅಂಬೇಡ್ಕರ್‌ ಬಗ್ಗೆ ನಿಮ್ಮ ಮಾತುಗಳೆಲ್ಲಾ ಡ್ರಾಮಾ ಎಂದು ಸಾಬೀತಾಗುತ್ತದೆ ಎಂದು ಡೆಡ್‌ಲೈನ್‌ ಕೊಟ್ಟರು.

Ads on article

Advertise in articles 1

advertising articles 2

Advertise under the article