
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; 8 ಮಂದಿಯ ಬಂಧನ; ಕೊಲೆಗೆ ನಿಜವಾದ ಕಾರಣ ಇಲ್ಲಿದೆ....
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದು, ಬಂಧಿತರ ವಿವರ ನೀಡಿದ್ದಾರೆ.
ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಎಂಬಾತ ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ಫಂಡಿಂಗ್ ಮಾಡಿದ್ದಾಗಿಯೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಂಧಿತರು...
ಬಂಧಿತರನ್ನು ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ ಎಂದು ಗುರುತಿಸಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದೇನು?
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು ಹೇಳಿದ್ದಾರೆ.
ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ಈ 5 ಲಕ್ಷ ರೂಪಾಯಿಗಾಗಿ ಆದಿಲ್ ಫಂಡಿಂಗ್ ಮಾಡಿದ್ದ. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ...
ಇನ್ನು ಪೊಲೀಸ್ ಅಧಿಕಾರಿಗಳೊಂದಿಗಿನ ಸಭೆ ಬಳಿಕ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೋಮು ಸಂಘರ್ಷ ತಡೆಗೆ ಐಜಿ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಸ್ಥಾಪಿಸಲಾಗುತ್ತೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.