ಬೇಲೂರು: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಪ್ರಕರಣ; ಆರೋಪಿ ಲೀಲಮ್ಮ ಬಂಧನ
ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣಕ್ಕೆ ಸಂಬಂಧ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಹಾಸನದ ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಈ ಘಟನೆ ನಡೆದಿತ್ತು. ಬೆಳಗ್ಗೆ ಭಕ್ತಾಧಿಗಳು ಕೈಮುಗಿಯಲು ಹೋದಾಗ ಗಣಪತಿಗೆ ಚಪ್ಪಲಿ ಹಾರ ಹಾಕಿರುವುದನ್ನು ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ಲೀಲಮ್ಮ ಎಂಬ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯ ಬಳಿಕ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಪೊಲೀಸರು 8 ತನಿಖಾ ತಂಡಗಳನ್ನು ರಚಿಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆ ಚಪ್ಪಲಿ ಧರಿಸಿ ಒಳ ಹೋಗಿ, ಬರಿಗಾಲಿನಲ್ಲಿ ಹೊರ ಬಂದಿರುವುದು ದೃಢಪಟ್ಟಿತ್ತು. ಇದರಿಂದಲೇ ಮಹಿಳೆ ಈ ಕೃತ್ಯ ಎಸಗಿರುವ ಶಂಕೆ ಗಟ್ಟಿಯಾಯಿತು. ಸದ್ಯ ಪೊಲೀಸರು ಲೀಲಮ್ಮನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.