ಭಾಲ್ಕಿ; ಸಿಡಿಲಿಗೆ ಬಲಿಯಾದ ರೇವಣಸಿದ್ದಪ್ಪ, ಯಲ್ಲಾಲಿಂಗ ಪರಿವಾರದ ನೋವಿನಲ್ಲಿ ನಾನಿದ್ದೇನೆ: ಎರಡು ಕುಟುಂಬಕ್ಕೂ ತಲಾ ಐದು ಲಕ್ಷ ರೂ.ಚೆಕ್ ವಿತರಿಸಿದ ಸಚಿವ ಈಶ್ವರ್ ಖಂಡ್ರೆ

ಬೀದರ್: ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಕಳೆದ ಏಪ್ರಿಲ್  23ರಂದು ಸಂಜೆ ಸಂಭವಿಸಿದ ಸಿಡಿಲು ಬಡಿತದಿಂದ ಇಬ್ಬರು ಯುವಕರು ಮೃತಪಟ್ಟ ದುರ್ಘಟನೆ ನನಗೆ ಅತ್ಯಂತ ನೋವು ತಂದಿದೆ ಎಂದಿರುವ ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ ಖಂಡ್ರೆ, ಮೃತರಾದ ನಾವದಗಿ ಗ್ರಾಮದ ರೇವಣಸಿದ್ದಪ್ಪ (ತಂದೆ: ಹಣಮಂತ) ಹಾಗೂ ಜೇವರ್ಗಿ ತಾಲೂಕಿನ ಸಿಗರತಹಳ್ಳಿ ಗ್ರಾಮದ ಯಲ್ಲಾಲಿಂಗ (ತಂದೆ: ಸಿದ್ದಪ್ಪ) ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಇಂದು ನಾವದಗಿ ಗ್ರಾಮಕ್ಕೆ ಭೇಟಿ ನೀಡಿ ರೇವಣಸಿದ್ದಪ್ಪ ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ತಿಳಿಸಿದ ಸಚಿವರು, ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.

ಜೇವರ್ಗಿ ತಾಲೂಕಿನ ಯಲ್ಲಾಲಿಂಗ ಅವರ ಕುಟುಂಬಕ್ಕೂ ಸಹ ₹5 ಲಕ್ಷ ಪರಿಹಾರ ಧನವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದ ಸಚಿವರು ಈ ದುಃಖದ ಸಮಯದಲ್ಲಿ ಅವರ ಕುಟುಂಬಗಳೊಂದಿಗೆ ನಾನಿದ್ದೇನೆ ಎಂದರು.. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎನ್ನುತ್ತಾ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸಿಡಿಲು ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು..