'ಉಡುಪಿ ಉಚ್ಚಿಲ ದಸರಾ' ವೈಭವ; ವಸ್ತು ಪ್ರದರ್ಶನದಲ್ಲಿ ತಮ್ಮ ಕೈಚಳಕ, ಕಲಾಕೃತಿಗಳ ಮೂಲಕ ಮಿಂಚುತ್ತಿರುವ ಕಲಾವಿದರಿಗೆ ಸನ್ಮಾನ
>>ವಿಶೇಷ ಗೌರವಕ್ಕೆ ಪಾತ್ರರಾದ ವಿಕಲಚೇತನ ಕಲಾವಿದರಾದ ಗಣೇಶ್-ಸುಮಾ ಪಂಜಿಮಾರು
>>ಉದ್ಯಮಿ ಕೃಷ್ಣಮೂರ್ತಿ ಮಂಜರುಗೆ ಸನ್ಮಾನ
ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ 4ನೇ ವರ್ಷದ 'ಉಡುಪಿ ಉಚ್ಚಿಲ ದಸರಾ'ದಲ್ಲಿ ಮುಖ್ಯ ಆಕರ್ಷಣೆಯ ಕೇಂದ್ರವಾಗಿರುವ ವಸ್ತು ಪ್ರದರ್ಶನದಲ್ಲಿ ತಮ್ಮ ಕೈಚಳಕ, ಕಲಾಕೃತಿಗಳ ಮೂಲಕ ಮಿಂಚುತ್ತಿರುವ ಕಲಾವಿದರನ್ನು ಗುರುತಿಸಿ ಸನ್ಮಾನಿಸಲಾಯಿತು.
4ನೇ ದಿನವಾದ ಗುರುವಾರ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರು ಹಾಗು ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ದಸರಾದ ಆಕರ್ಷಣೆಯ ಕೇಂದ್ರವಾಗಿರುವ ವಸ್ತು ಪ್ರದರ್ಶನದಲ್ಲಿ ತಮ್ಮ ದೌರ್ಬಲ್ಯವನ್ನು ಮೆಟ್ಟಿನಿಂತು ಬಲವನ್ನು ತೋರಿಸುತ್ತಿರುವ ವಿಕಲಚೇತನ ಕಲಾವಿದರಾದ( ಕುಬ್ಜ ಸಹೋದರರ) ಗಣೇಶ್ ಪಂಜಿಮಾರು ಹಾಗು ಸುಮಾ ಪಂಜಿಮಾರು ಅವರ ಪೈಂಟಿಂಗ್ಸ್, ಇನ್ನಿತರ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ವಸ್ತು ಪ್ರದರ್ಶನ ವೀಕ್ಷಿಸಲು ಬಂದ ಎಲ್ಲರೂ ನಿಬ್ಬೆರಗಾಗುವಂತೆ ಈ ಇಬ್ಬರು ತಮ್ಮ ಕೈಚಳಕದ ಮೂಲಕ ಕಲಾಕೃತಿ ರಚಿಸುತ್ತಿದ್ದಾರೆ. ಇವರಿಬ್ಬರ ಈ ಸಾಧನೆಯನ್ನು ಪರಿಗಣಿಸಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಹೈದರಾಬಾದಿನಲ್ಲಿ ಯಶಸ್ವಿ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಡಾ.ಜಿ.ಶಂಕರ್ ಸೇರಿದಂತೆ ಗಣ್ಯರು ಈ ಇಬ್ಬರು ಸಾಧಕರನ್ನು ಸನ್ಮಾನಿಸಿದರು. ಈ ವೇಳೆ ಅವರ ತಾಯಿ ಕೂಡ ಅವರೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೃಷ್ಣಮೂರ್ತಿ ಮಂಜರುಗೆ ಆತ್ಮೀಯ ಸನ್ಮಾನ
ಹೋಟೆಲ್ ಉದ್ಯಮವನ್ನು ಕಟ್ಟಿ ದೊಡ್ಡ ರೀತಿಯಲ್ಲಿ ಸಾಧನೆ ಮಾಡಿರುವ ಕೃಷ್ಣಮೂರ್ತಿ ಮಂಜರು ಅವರನ್ನು ಈ ವೇಳೆ ಎಲ್ಲ ಗಣ್ಯರು ಸೇರಿ ಸನ್ಮಾನಿಸಿ, ಗೌರವಿಸಿದರು.
ವಸ್ತು ಪ್ರದರ್ಶನದ ಕಲಾವಿದರಿಗೆ ಸನ್ಮಾನ
ವಸ್ತು ಪ್ರದರ್ಶನದಲ್ಲಿ ತೆಂಗಿನ ಸಿರಿಯಲ್ಲಿ ಕಲಾಕೃತಿ ರಚಿಸಿರುತ್ತಿರುವ ಕಲಾವಿದ ಕಾಪುವಿನ ಸಂಜೀವ, ಸಾಂಪ್ರದಾಯಿಕ ರೀತಿಯಲ್ಲಿ ಎತ್ತಿನ ಗಾಣ ಸಹಿತ ಅಲೆ ಮನೆ ಕಬ್ಬಿಣ ಹಾಲು ತಯಾರಿಕೆಯ ಪ್ರಾತ್ಯಕ್ಷಿಕೆ ನೀಡುತ್ತಿರುವ ಶರತ್ ಅಲೆಯ, ಸೋನ್ಸ್ ನರ್ಸರಿಯ ಅನಿಲ್ ಸೋನ್ಸ್, ಪಂಚಲೋಹ ಕಲಾವಿದ ರಾಜೇಶ್ ಟಿ.ಆಚಾರ್ಯ, ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವ ರಾಜೇಶ್ ಮೆಂಡನ್, ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕಿಯನ್ನು ಇದೇ ವೇಳೆ ಸನ್ಮಾಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಮುಂಬೈಯ ದಿವ್ಯಾ ಶಿಪ್ಪಿಂಗ್ ಫಾರ್ವರ್ಡಿಂಗ್ ಕಂ. ಪ್ರೈ. ಲಿ ನ ಆಡಳಿತ ನಿರ್ದೇಶಕ ವೇದಪ್ರಕಾಶ್ ಶ್ರೀಯಾನ್ ಹಾಗು ಅವರ ಧರ್ಮ ಪತ್ನಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಗುಂಡು ಬಿ.ಅಮೀನ್, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಸತೀಶ್ ಕುಂದರ್ ಮಲ್ಪೆ, ಉಷಾ ರಾಣಿ, ಸುಗುಣ ಕರ್ಕೇರ, ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳ್, ಯತೀಶ್ ಕಿದಿಯೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಕಾರ್ಯಕ್ರಮವನ್ನು ನಿರೂಪಿಸಿದರು.
ಇದಕ್ಕೂ ಮೊದಲು ಬರೋಡಾ ಬ್ಯಾಂಕಿನ ಝೋನಲ್ ಮೆನೇಜರ್ ರಾಜೇಶ್ ಖನ್ನಾ ಅವರನ್ನು ನಾಡೋಜ ಡಾ.ಜಿ. ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಮತ್ತಿತರರು ಸಾಲು, ಸ್ಮರಣಿಕೆ ನೀಡಿ ಗೌರವಿಸಿದರು.