ಹಾವನ್ನು ಕೊರಳಿಗೆ ಸುತ್ತಿಕೊಂಡು ಹೀರೊ ಆಗಲು ಹೋಗಿ ಜೀವ ಕಳೆದುಕೊಂಡ ಯುವಕ!
ಮುಜಾಫರ್‌ನಗರ: ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ಯುವಕನೋರ್ವ ಜೀವಬಿಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.
24 ವರ್ಷದ ಮೋಹಿತ್ ಕುಮಾರ್ ಸಾವನ್ನಪ್ಪಿದ ಯುವಕ. ಮುಜಾಫರ್‌ಗರ ಜಿಲ್ಲೆಯ ಮೊರ್ನಾ ಗ್ರಾಮದ ಭೊಪಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಾವನ್ನು ಕೊರಳಿಗೆ ಸುತ್ತಿಕೊಂಡ ಯುವಕ ಬಳಿ ಆ ದೃಶ್ಯದ ವೀಡಿಯೋ ಮಾಡಲು ಮುಂದಾಗಿದ್ದಾನೆ. ಅಷ್ಟರಲ್ಲಿ ಇವನ ಕಿರುಕುಳದಿಂದ ಬೆದರಿದ ಹಾವು ಈತನಿಗೆ ಕಚ್ಚಿದ್ದು, ಕೂಡಲೇ ಮೋಹಿತ್ ಕುಮಾರ್‌ನನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಬದುಕುಳಿಯಲಿಲ್ಲ.
ಪೊಲೀಸರ ಪ್ರಕಾರ ಭೊಪಾದ ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಹಾವನ್ನು ನೋಡಿ ಅಲ್ಲಿದ್ದವರು ಬೊಬ್ಬೆ ಹೊಡೆದಿದ್ದು, ಗದ್ದಲ ಕೇಳಿ ನೆರೆಹೊರೆಯ ಹಲವಾರು ಜನ ಸ್ಥಳಕ್ಕೆ ಧಾವಿಸಿದರು. ಹಾಗೆಯೇ ಮೋಹಿತ್ ಅಲಿಯಾಸ್ ಬಂಟಿ ಕೂಡ ಅಲ್ಲಿಗೆ ಬಂದಿದ್ದು, ತನ್ನ ಬರಿ ಕೈಗಳಿಂದ ಸರೀಸೃಪವನ್ನು ಹಿಡಿದಿದ್ದಾನೆ. ಹಾವನ್ನು ಹಿಡಿದ ಆತ ಸುಮ್ಮನೇ ಅದನ್ನು ಚೀಲಕ್ಕೆ ತುಂಬಿಸಿ ಬೇರೆಡೆ ಬಿಟ್ಟಿದ್ದರೆ ಬದುಕುಳಿಯುತ್ತಿದ್ದನೋ ಏನೋ, ಆದರೆ ಆತ ನೆರೆದಿದ್ದ ಜನಸಮೂಹದ ಮುಂದೆಯೇ ಹಾವಿನೊಂದಿಗೆ ಸಾಹಸ ಪ್ರದರ್ಶಿಸಲು ಪ್ರಾರಂಭಿಸಿದ್ದಾನೆ. ಬರೀ ಇಷ್ಟೇ ಅಲ್ಲ ಈ ಘಟನೆಯನ್ನು ತನ್ನ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈತನ ಈ ಕೃತ್ಯದ ಸಮಯದಲ್ಲಿ, ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು. ಅವನು ಹಾವನ್ನು ಚೀಲಕ್ಕೆ ಹಾಕುವಲ್ಲಿ ಯಶಸ್ವಿಯಾದರೂ, ಸ್ವಲ್ಪ ಸಮಯದ ನಂತರ ಅವನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಮೋಹಿತ್‌ನನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಯ ಸಮಯದಲ್ಲಿ ಮೋಹಿತ್ ಸಾವನ್ನಪ್ಪಿದ್ದಾನೆ. ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.