ಇಂದು ವೈಭವದ 'ಉಡುಪಿ ಉಚ್ಚಿಲ ದಸರಾ-2025'ಕ್ಕೆ ವಿದ್ಯುಕ್ತ ಚಾಲನೆ

ಫಲಪುಷ್ಪ, ಗುಡಿಕೈಗಾರಿಕೆ, ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ ಸೇರಿದಂತೆ ನಾನಾ ಪ್ರದರ್ಶನಗಳ ಉದ್ಘಾಟನೆ
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ 'ಉಡುಪಿ ಉಚ್ಚಿಲ ದಸರಾ' ಮಹೋತ್ಸವ ಇಂದಿನಿಂದ(ಸೋಮವಾರ) ಅ.2ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆಯಲಿದೆ.
4ನೇ ವರ್ಷದ ಈ ದಸರಾ ಮಹೋತ್ಸವವು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಬಾರಿ ಬಹಳ ವಿಜೃಂಭಣೆಯಿಂದ ನಡೆಯಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಸೋಮವಾರ ಬೆಳಗ್ಗೆ 9 ಗಂಟೆಗೆ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು.
ಬೆಳಗ್ಗೆ 10 ಗಂಟೆಗೆ ದಸರಾ ಮಹೋತ್ಸವದ ಫಲಪುಷ್ಪ ಪ್ರದರ್ಶನ , ಗುಡಿಕೈಗಾರಿಕೆ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಮರಳು ಕಲಾಕೃತಿ, ಕುಬ್ಜ ಸಹೋದರರ ಕಲಾಕೃತಿ, ಜನಜಾಗೃತಿ ಕಲಾಕೃತಿ, ವಿಶೇಷ ಶಾಲೆಯ ಮಕ್ಕಳ ಕಲಾಕೃತಿ ಸೇರಿದಂತೆ ನಾನಾ ಪ್ರದರ್ಶನಗಳ ಉದ್ಘಾಟನೆ ನಡೆಯಲಿದೆ. ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೆರವೇರಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ 'ಉಡುಪಿ ಉಚ್ಚಿಲ ದಸರಾ-2025'ರ ಅಧಿಕೃತ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗಣ್ಯರು, ದಾನಿಗಳು, ಭಕ್ತಾದಿಗಳ ಸಮ್ಮುಖ ನೆರವೇರಲಿದೆ. ಈ ಬಾರಿ ವಿಶೇಷವಾಗಿ ಸೀರೆ ಮೇಳ ಆಯೋಜಿಸಲಾಗಿದೆ.


