ಸಚಿವ ಮಂಕಾಳ ಎಸ್. ವೈದ್ಯ ಹಾಗು ಧರ್ಮ ಪತ್ನಿ ಲತಾರನ್ನು ಸನ್ಮಾನಿಸಿದ ಡಾ.ಜಿ.ಶಂಕರ್
ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಕರಾವಳಿಯ ನಾಡಹಬ್ಬ 4ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಬುಧವಾರ ಮೀನುಗಾರಿಕಾ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಈ ವೇಳೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಹಾಗು ಅವರ ಧರ್ಮ ಪತ್ನಿ ಲತಾ ಅವರನ್ನು ನಾಡೋಜ ಡಾ.ಜಿ.ಶಂಕರ್ ಹಾಗು ಅಧ್ಯಕ್ಷ ಜಯ ಸಿ.ಕೋಟ್ಯಾನ್ ಸಾರಥ್ಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ಎಸ್. ವೈದ್ಯ ಅವರು, ಶ್ರೀ ಕ್ಷೇತ್ರ ಉಚ್ಚಿಲ ಇಷ್ಟೊಂದು ಸುಂದರವಾಗಿ ಕಂಗೊಳಿಸಲು ಹಾಗು ವಿಖ್ಯಾತಿಗೊಳ್ಳಲು ಡಾ.ಜಿ.ಶಂಕರ್ ಅವರ ಸಾರಥ್ಯವನ್ನು ಕೊಂಡಾಡಿದರು.
ನಾವೋ ಮೊದಲು ಮಹಾಲಕ್ಷ್ಮಿ ದರ್ಶನ ಮಾಡಬೇಕಿದ್ದರೆ ಕೊಲ್ಲಾಪುರಕ್ಕೆ ಹೋಗಬೇಕಿತ್ತು. ಈಗ ನಾವು ಉಚ್ಚಿಲಕ್ಕೆ ಬರುವಂತಾಗಿದೆ. ಇದಕ್ಕೆ ಕಾರಣೀಭೂತರಾದ ನಮ್ಮ ಮಾರ್ಗದರ್ಶಕರು, ಎಲ್ಲ ಸಮುದಾಯಕ್ಕೆ ಬೇಕಾಗಿರುವ ಡಾ.ಜಿ.ಶಂಕರ್ ಅವರಿಂದಾಗಿ ಉಚ್ಚಿಲದಲ್ಲಿ ಇಂಥ ಭವ್ಯ ದೇವಸ್ಥಾನವನ್ನು ನಡೆಸಿಕೊಂಡು ಹೋಗುತ್ತಿರುವುದು ನಮ್ಮೆಲರ ಪುಣ್ಯ ಎಂದರು.
ನಾವು ದಸರಾ ನೋಡಬೇಕಿದ್ದರೆ ಮೈಸೂರಿಗೆ ಹೋಗಬೇಕಿತ್ತು. ಆದರೆ ನಮ್ಮೆಲ್ಲರ ಭಾಗ್ಯದಿಂದ ಡಾ.ಜಿ.ಶಂಕರ್ ಅವರ ಕೃಪೆಯಿಂದಾಗಿ ಉಡುಪಿಯ ಉಚ್ಚಿಲದಲ್ಲಿಯೇ ಮೈಸೂರಿನಂಥ ಭವ್ಯ ದಸರಾವನ್ನು ಕಾಣಲು ಸಾಧ್ಯವಾಗಿದೆ. ಇದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ.
ನಾವು ಮೀನುಗಾರರು ಸಮುದ್ರವನ್ನೇ ನಂಬಿರುವವರು. ದೇವರನ್ನು ನಂಬಿ ಸಮುದ್ರಕ್ಕೆ ಹೋಗುತ್ತೇವೆ, ಆದರೆ ಖಾಲಿ ಬರುವುದಿಲ್ಲ. ದೇವರು ನಮ್ಮನ್ನು ಯಾವತ್ತೂ ಕೈಬಿಟ್ಟಿಲ್ಲ. ಮೀನುಗಾರಿಕೆ ಒಳ್ಳೆಯ ವೃತ್ತಿ. ಈ ವೃತ್ತಿ ಮಾಡುವ ವಾವು ದೇವರಿಗೆಂದೇ ಲಾಭದಲ್ಲಿ ಒಂದು ಪಾಲನ್ನು ಮೀಸಲಿಟ್ಟಿರುತ್ತೇವೆ, ಅಂತ ಶ್ರೀಮಂತ ಸಮುದಾಯದಲ್ಲಿ ಹುಟ್ಟಿದ್ದಕ್ಕೆ ನಾವು ಧನ್ಯರು ಎಂದು ಹೇಳಿದರು.
ಮೋಹನ್ ಬೆಂಗ್ರೆ, ಪದ್ಮಾಕರ್, ಸಂಧ್ಯಾ ದೀಪ ಸುನಿಲ್, ಉಷಾ ರಾಣಿ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ‘ಉಡುಪಿ ಉಚ್ಚಿಲ ದಸರಾ’ಕ್ಕೆ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರನ್ನು ದೇವಸ್ಥಾನದ ವತಿಯಿಂದ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ದಸರಾ ಹಿನ್ನೆಲೆಯಲ್ಲಿ ಉಡುಪಿ ಕಾಣಿಯೂರು ಮಠಾಧೀಶರು ಕೂಡ ಭೇಟಿ ನೀಡಿದ್ದರು.


