ಆಸ್ಟ್ರೇಲಿಯಾದ ಸಿಡ್ನಿ ಗುಂಡಿನ ದಾಳಿ; ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ: ಪಾಕಿಸ್ತಾನ ಮೂಲದ ತಂದೆ ಮತ್ತು ಮಗ ಭಾಗಿ

ಆಸ್ಟ್ರೇಲಿಯಾದ ಸಿಡ್ನಿ ಗುಂಡಿನ ದಾಳಿ; ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ: ಪಾಕಿಸ್ತಾನ ಮೂಲದ ತಂದೆ ಮತ್ತು ಮಗ ಭಾಗಿ

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯಹೂದಿ ಹನುಕ್ಕಾ ಹಬ್ಬದ ಆಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ತಂದೆ ಮತ್ತು ಮಗ ಭಾಗಿಯಾಗಿದ್ದಾರೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಅತ್ಯಂತ ಮಾರಕ ಗುಂಡಿನ ದಾಳಿ ಇದು ಎನ್ನಲಾಗಿದೆ.

ಪೊಲೀಸರ ಪ್ರಕಾರ, 50 ವರ್ಷದ ಸಾಜಿದ್ ಅಕ್ರಮ್ ಎಂಬಾತನನ್ನು ಸ್ಥಳದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆತನ 24 ವರ್ಷದ ಮಗ ನವೀದ್ ಅಕ್ರಮ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಪಾಕಿಸ್ತಾನಿ ಮೂಲದವರು ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಮಾಹಿತಿ ನೀಡಿದ್ದು, ನವೀದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ಜನಿಸಿದ ನಾಗರಿಕನಾಗಿದ್ದು, ಆತನ ತಂದೆ ಸಾಜಿದ್ ಅಕ್ರಮ್ 1998ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಗೆ ಬಂದಿದ್ದ ಎಂದು ತಿಳಿದು ಬಂದಿದೆ.

ಬೇಸಿಗೆಯ ದಿನದ ಸಂಜೆ ‘ಚಾನುಕಾ ಬೈ ದಿ ಸೀ’ ಎಂಬ ಹನುಕ್ಕಾ ಹಬ್ಬದ ಕಾರ್ಯಕ್ರಮಕ್ಕಾಗಿ ಬೋಂಡಿ ಬೀಚ್ ಸಮೀಪದ ಉದ್ಯಾನವನದಲ್ಲಿ ಸುಮಾರು 1,000 ಮಂದಿ ಸೇರಿದ್ದರು. ಸಂಜೆ 6.45ರ ಸುಮಾರಿಗೆ ಇಬ್ಬರು ಬಂದೂಕುಗಳಿಂದ ಗುಂಡು ಹಾರಿಸಿದ್ದು, ಸುಮಾರು 10 ನಿಮಿಷಗಳ ಕಾಲ ಭೀತಿಯ ವಾತಾವರಣ ನಿರ್ಮಾಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಜನರು ಬೀಚ್ ಹಾಗೂ ಹತ್ತಿರದ ಬೀದಿಗಳಲ್ಲಿ ಚದುರಿ ಹೋದರು. ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ದಾಳಿಯಲ್ಲಿ ಬಳಸಿದ ಆಯುಧಗಳ ಕುರಿತು ಪೊಲೀಸರು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ.

ದಾಳಿಯ ವೇಳೆ ಒಬ್ಬ ನಾಗರಿಕನು ಬಂದೂಕುಧಾರಿಯನ್ನು ಎದುರಿಸಿ ನಿಶ್ಯಸ್ತ್ರಗೊಳಿಸಿದ ದೃಶ್ಯಗಳು ಟೆಲಿವಿಷನ್ ಗಳಲ್ಲಿ ಪ್ರಸಾರವಾಗಿವೆ. ಆ ವ್ಯಕ್ತಿಯನ್ನು ಅಹ್ಮದ್ ಅಲ್ ಅಹ್ಮದ್ ಎಂದು ಗುರುತಿಸಲಾಗಿದ್ದು, ನ್ಯೂ ಸೌತ್ ವೇಲ್ಸ್ ಪ್ರೀಮಿಯರ್ ಕ್ರಿಸ್ ಮಿನ್ಸ್ ಅವರು, ಅವರನ್ನು “ನಿಜವಾದ ಹೀರೋ” ಎಂದು ಶ್ಲಾಘಿಸಿದ್ದಾರೆ.

ಮೃತಪಟ್ಟವರ ವಯಸ್ಸು 10 ರಿಂದ 87 ವರ್ಷಗಳ ನಡುವೆ ಇದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ಬೋಂಡಿಯ ಚಾಬಾದ್ ಕೇಂದ್ರದ ಸಹಾಯಕ ರಬ್ಬಿ ಹಾಗೂ ಕಾರ್ಯಕ್ರಮದ ಆಯೋಜಕ ರಬ್ಬಿ ಎಲಿ ಶ್ಲಾಂಗರ್ ಸೇರಿದ್ದಾರೆ ಎಂದು ಚಾಬಾದ್ ಸಂಸ್ಥೆ ತಿಳಿಸಿದೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಮೃತರಿಗೆ ಗೌರವ ಸಲ್ಲಿಸಿದರು. ಈ ಘಟನೆಯನ್ನು ಅವರು “ರಾಷ್ಟ್ರದ ಕರಾಳ ಕ್ಷಣ” ಹಾಗೂ “ಯೆಹೂದ್ಯ ವಿರೋಧಿ ಭಯೋತ್ಪಾದನಾ ಕೃತ್ಯ” ಎಂದು ಕರೆದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ವಿಶ್ವ ನಾಯಕರು ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

1996ರಲ್ಲಿ ಟ್ಯಾಸ್ಮೇನಿಯಾದ ಪೋರ್ಟ್ ಆರ್ಥರ್‌ನಲ್ಲಿ ನಡೆದ ದಾಳಿಯ ನಂತರ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿ ಇದು ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article