ಫೆ.14-15ರಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 'ಶಿವಪಾಡಿ ವೈಭವ': ರಘುಪತಿ ಭಟ್
ಉಡುಪಿ: ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಇದೇ ಫೆ. 14 ಮತ್ತು 15ರಂದು 'ಶಿವಪಾಡಿ ವೈಭವ' ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.14ರಂದು ಬೆಳಿಗ್ಗೆ 9:30ಕ್ಕೆ ಆರೋಗ್ಯ ಶಿಬಿರದ ಉದ್ಘಾಟನೆ ನಡೆಯಲಿದ್ದು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿದೆ. ನಂತರ ಸಾಹಿತ್ಯ ಮೇಳ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯ ವಿವಿಧ ವಿಭಾಗಗಳಿಂದ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಶಿಬಿರಗಳು, ಸೂಕ್ತ ಯೋಗ ಅಭ್ಯಾಸ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ, ರಾಜ್ಯ ಮಟ್ಟದ ನರ್ತನ ಸ್ಪರ್ಧೆ, ಯಕ್ಷಗಾನ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಅಂದಿನ ಸಭಾ ಕಾರ್ಯಕ್ರಮದಲ್ಲಿ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಫೆ.15ರಂದು ಬೆಳಿಗ್ಗೆ 5ರಿಂದ 7ರ ವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯವರಿಂದ ಸಾಮೂಹಿಕ ಯೋಗ ಶಿಬಿರ, ಉಡುಪಿ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ನೇತೃತ್ವದಲ್ಲಿ ಉಚಿತ ಕಣ್ಣಿನ ಪರೀಕ್ಷೆ ಶಿಬಿರ, ಉಚಿತ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ನಡೆಯಲಿದೆ. ನಂತರ ಸ್ಥಳೀಯರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ವಿಶೇಷ ಕಾರ್ಯಕ್ರಮವಾಗಿ ಮಧ್ಯಾಹ್ನ 'ಶಿವ ಸಹಸ್ರ ಕಂಠ ಗಾಯನ' ವಿನೂತನ ಕಾರ್ಯಕ್ರಮ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಬಳಿಕ ಝೀ ಕನ್ನಡ ಸರಿಗಮಪ ಖ್ಯಾತಿಯ ತಂಡದಿಂದ 'ಗಾನ ಶರಧಿ' ಕಾರ್ಯಕ್ರಮ ಮತ್ತು ರಾತ್ರಿಪೂರ್ತಿ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ:
ಫೆ.14ರಂದು ಪ್ರಾತಃಕಾಲ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾರುದ್ರ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.15ರಂದು ಅಖಂಡ ರುದ್ರ ಪಾರಾಯಣ, ಮಹಾರುದ್ರ ಪೂಜೆ, ಪಂಚಾಮೃತ ಅಭಿಷೇಕ ಪುರಸ್ಪರ ಅಷ್ಟೋತ್ತರ ಸಹಸ್ರ ಬಿಲ್ವಾರ್ಚನೆ, ಮಹಾ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.
ವಿವಿಧ ಸ್ಪರ್ಧೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ಮಹೇಶ್ ಠಾಕೂರ್ ಮಾತನಾಡಿ, ಕಾರ್ಯಕ್ರಮದಲ್ಲಿ ಒಟ್ಟು 250ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ಆಹಾರ ಸೇರಿದಂತೆ ಕೃಷಿ ಪರಿಕರಗಳು ಮತ್ತು ಇತರ ಸೌಲಭ್ಯಗಳ ಮಳಿಗೆಗಳನ್ನು ತೆರೆಯಲಾಗುತ್ತದೆ. ಮನರಂಜನೆಗಾಗಿ ಅಮ್ಯೂಸ್'ಮೆಂಟ್ ಪಾರ್ಕ್ ಹಾಗೂ ಇನ್ನಿತರ ವಸ್ತುಪ್ರದರ್ಶನ ಇರಲಿದೆ.
ಫೆ.14ರ ಮಧ್ಯಾಹ್ನ 3ರಿಂದ ಕಡಿಯಾಳಿಯ ಪ್ರಶಾಂತ್ ಆ್ಯಂಡ್ ಡ್ಯಾನ್ಸ್ ಅಕಾಡೆಮಿ ಸಂಯೋಜನೆಯಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ 'ನರ್ತನ-2026' ನಡೆಯಲಿದೆ. ಭಕ್ತಿಗೀತೆ, ದೇಶ ಭಕ್ತಿಗೀತೆ, ಜನಪದ ಗೀತೆ, ಶಾಸ್ತ್ರೀಯ ಮತ್ತು ಅರೆಶಾಸ್ತ್ರೀಯ ನೃತ್ಯಗಳು ಸ್ಪರ್ಧೆಯಲ್ಲಿ ಪ್ರದರ್ಶನಗೊಳ್ಳಲಿದೆ. ಅದರಲ್ಲಿ 600ಕ್ಕೂ ಹೆಚ್ಚು ನೃತ್ಯಗಾರರು ಭಾಗವಹಿಸುವರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ದಿನೇಶ್ ಪ್ರಭು, ದಿನೇಶ್ ಶ್ರೀಧರ ಸಾಮಂತ, ಗೋಪಾಲಕೃಷ್ಣ ಪ್ರಭು, ಸಂಜಯ್ ಪ್ರಭು, ಪ್ರಕಾಶ್ ಪ್ರಭು, ಸತೀಶ್ ಪಾಟೀಲ್, ಶಿವಾನಂದ ಪ್ರಭು, ಶ್ರೀಕಾಂತ ಪ್ರಭು, ಅಶೋಕ್ ಸಾಮಂತ್, ಸಂದೇಶ ಪ್ರಭು ಉಪಸ್ಥಿತರಿದ್ದರು.