ಉಡುಪಿ: ಕ್ರಿಕೆಟಿಗ, ಸಂಘಟಕ ಉದ್ಯಾವರ ಪಾಂದೆ ನಿವಾಸಿ ಮೊಹಮ್ಮದ್ ಸಮೀರ್ ಷರೀಫ್ (43) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ತಡರಾತ್ರಿ ನಿಧನರಾಗಿದ್ದು, ಅವರ ನಿಧನಕ್ಕೆ ಕೆ. ಪಿ.ಸಿ ಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ಶೇಖ್ ವಹೀದ್ ಸಂತಾಪ ಸೂಚಿಸಿದ್ದಾರೆ.
ಯುಎಇಯಲ್ಲಿದ್ದ ಅವರು ಅಸೌಖ್ಯದ ಹಿನ್ನೆಲೆಯಲ್ಲಿ ಕೆಲವು ಸಮಯಗಳ ಹಿಂದೆ ಊರಿಗೆ ತೆರಳಿ ಚಿಕ್ಕಿತ್ಸೆ ಪಡೆಯುತ್ತಿದ್ದರು. ಹಲವಾರು ವರ್ಷಗಳಿಂದ ಯುಎಇಯ ಶಾರ್ಜಾದಲ್ಲಿ ನೆಲೆಸಿದ್ದ ಮೊಹಮ್ಮದ್ ಸಮೀರ್ ಷರೀಫ್, ಯುಎಇ ಸಾಹೇಬಾನ್, ದುಬೈ ಕರ್ನಾಟಕ ಸಂಘ, ಕನ್ನಡಿಗಾಸ್ ಹೆಲ್ಪ್ ಲೈನ್, ಕನ್ನಡಿಗ ಫೆಡರೇಷನ್ ಸೇರಿದಂತೆ ಹಲವಾರು ಕನ್ನಡಪರ ಹಾಗು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.
ದುಬೈ ಕರ್ನಾಟಕ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದು, ಯುಎಇಯಲ್ಲಿ ಕೊರೋನಾ ಹಾಗು ಪ್ರವಾಹದ ವೇಳೆ ಹಗಲಿರುಳು ಎನ್ನದೆ ಸಕ್ರೀಯವಾಗಿ ತನ್ನನ್ನು ತೊಡಗಸಿಕೊಂಡಿದ್ದರು. ಯುಎಇ ಹಾಗು ಊರಿನಲ್ಲಿ ಕಷ್ಟದಲ್ಲಿದ್ದ ಹಲವಾರು ಜನರಿಗೆ ಸಹಾಯ ಹಸ್ತನೀಡುವ ಮೂಲಕ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆಯ ಸಕ್ರೀಯ ಸದಸ್ಯರಾಗಿ, ಉದ್ಯಾವರ ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯರಾಗಿ, ಉದ್ಯಾವರ ಮುಸ್ಲಿಂ ಯಂಗ್ ಮೆನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾಗಿದ್ದ ಸಮೀರ್, ಓರ್ವ ಉತ್ತಮ ಕ್ರಿಕೆಟಿಗನಾಗಿದ್ದು, ಎಲ್ಲ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹಲವಾರು ಕ್ರಿಕೆಟ್ ಪಂದ್ಯಾಟಗಳಿಗೆ ಧನ ಸಹಾಯ ಮಾಡುವ ಮೂಲಕ ಉದ್ಯಾವರ ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ತಾಯಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
