ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಒಂದು ಚಿಂತನೆ, ಒಂದು ಚಳವಳಿ: ವಿನಯ ಕುಮಾರ್ ಸೊರಕೆ

ಉಡುಪಿ: ಜನರ ಜೀವನ ಮಟ್ಟ ಸುಧಾರಿಸಲು ಶಿಕ್ಷಣವು ಪ್ರಮುಖವಾದ ಅಸ್ತ್ರವಾಗಿದೆ ಎಂಬ ನಿಲುವಿನೊಂದಿಗೆ ಅಂಬೇಡ್ಕರ್, ಶಿಕ್ಷಣದ ಮೂಲಕ ಜನರ ಸಶಕ್ತೀಕರಣಕ್ಕೆ ಒತ್ತು ನೀಡಿದರು. ಮಹಿಳೆಯರ ಆರ್ಥಿಕ ಮತ್ತು ಸಾಮಾ ಜಿಕ ಹಕ್ಕುಗಳಿಗಾಗಿ ಬಲವಾಗಿ ಪ್ರತಿಪಾದಿಸಿದ ಅಂಬೇಡ್ಕರ್, ಕೇವಲ ಒಬ್ಬ ವ್ಯಕ್ತಿಯಲ್ಲ ಬದಲಾಗಿ ಒಂದು ಚಿಂತನೆ, ಒಂದು ಚಳವಳಿಯೂ ಹೌದು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ವತಿಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಅವರ ಆಲೋಚನೆಗಳು ಹಾಗೂ ತತ್ವಗಳು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಕಾಲದಲ್ಲೂ ಪ್ರಸ್ತುತ ವಾದವುಗಳಾಗಿವೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿಯ ಪಿಡುಗನ್ನು ತಮ್ಮ ಚಿಂತನೆಗಳು ಬರಹಗಳು ಹಾಗೂ ಹೋರಾಟದ ಮೂಲಕ ಶುದ್ಧೀಕರಿಸಲು ಪ್ರಾಮಾಣಿಕ ವಾಗಿ ಪ್ರಯತ್ನಿಸಿದ ಮಹಾ ಮನವತಾವಾದಿ ನಾಯಕರಾಗಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಅಂಬೇಡ್ಕರ್ ಭಾರತದ ಸಂವಿಧಾನ ರಚನೆಯ ಕರಡು ಸಮಿತಿ ಅಧ್ಯಕ್ಷರಾಗಿ ಲಿಂಗ, ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಖಾತ್ರಿಪಡಿಸಿದರು. ಸಂವಿಧಾನದ ರಚನೆಯೊಂದಿಗೆ ದೇಶದಲ್ಲಿ ಪ್ರಜಾಪ್ರಭುತ್ವದ ನೆಲೆಯನ್ನು ಗಟ್ಟಿಗೊಳಿಸಿದರೆಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಹಿತಿ ಗಣನಾಥ್ ಎಕ್ಕಾರ್ ಮಾತನಾಡಿ, ಸಮಾಜವಾದ ಪ್ರಜಾಪ್ರಭುತ್ವದ ಮುಖ್ಯ ತತ್ವ. ಅಂಬೇಡ್ಕರ್ ಅವರನ್ನು ದಲಿತ ಎಂದು ಪರಿಗಣಿಸದೆ ಅವರ ಜನ್ಮ ದಿನಾಚರಣೆಯನ್ನು ಸಾರ್ವತ್ರಿಕ ವಾಗಿ ಆಚರಿಸಬೇಕು. ಸಮಾಜದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅದರ ಹಕ್ಕಿಗಾಗಿ ಹೋರಾಟ ನಡೆಸಿದ ಅಂಬೇಡ್ಕರ್ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಲೈಬ್ರರಿಯನ್ನು ತಮ್ಮ ಮನೆಯಲ್ಲಿಯೇ ಹೊಂದಿದ್ದರು. ಅಂಬೇಡ್ಕರ್ ತತ್ವದೊಂದಿಗೆ ಬದುಕಿದವರು ತುಳುನಾಡಿನವರು. ಆದರೆ ಅದಕ್ಕೆ ಇಂದು ಧಕ್ಕೆ ಬಂದಿರುವುದು ವಿಷಾದನೀಯ. ಇಂದು ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿ ಕಾರ್ಯನಿರ್ವಹಿಸಲು ಕಾರಣವಾದ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅಂಬೇಡ್ಕರ್ ಮೂಲಕಾರಣೀ ಪುರುಷರಾಗಿದ್ದರು ಎಂದರು.

ಕಾಂಗ್ರೆಸ್ ಮುಖಂಡರಾದ ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಫಾ.ಮಿಲಿಯಂ ಮಾರ್ಟಿಸ್, ಭಾಸ್ಕರ್ ರಾವ್ ಕಿದಿಯೂರು, ಅಣ್ಣಯ್ಯ ಸೇರಿಗಾರ್, ಮಹಾಬಲ ಕುಂದರ್, ಹರಿಪ್ರಸಾದ್ ರೈ, ಉದ್ಯಾವರ ನಾಗೇಶ್ ಕುಮಾರ್, ಕೆ. ಪಿ.ಸಿ ಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ಶೇಖ್ ವಹೀದ್, ಶಶಿಧರ ಶೆಟ್ಟಿ ಎಲ್ಲೂರು, ಕಿರಣ್ ಹೆಗ್ಡೆ, ಶರ್ಫುದ್ದೀನ್ ಶೇಖ್, ಯತೀಶ್ ಕರ್ಕೆರ, ಸಂಧ್ಯಾ ತಿಲಕ್, ಸತೀಶ್ ಮಂಚಿ, ಸತೀಶ್ ಕೊಡವೂರು, ಲಕ್ಷೀಶ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಸುಕನ್ಯ ಪೂಜಾರಿ, ತಾರಾ ಬನ್ನಂಜೆ, ನಾಗಪ್ಪ ಕೊಠ್ಠಾರಿ, ಪದ್ಮನಾಭ ಬಂಗೇರ ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಜಯಕುಮಾರ್ ವಂದಿಸಿದರು.