ಹೊಸದಿಲ್ಲಿ: ನೀಟ್- ಪದವಿ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಟೆಲಿಗ್ರಾಮ್ ಆ್ಯಪನ್ನು ತಾತ್ಕಾಲಿಕವಾಗಿ ನಿಷೇಧಿಸುವ ಸರಕಾರದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸರಕಾರದ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಈ ಕ್ರಮವು ಪ್ರಶ್ನೆಪತ್ರಿಕೆ ಸೋರಿಕೆಯನ್ನು ನಿಜವಾಗಿಯೂ ತಡೆಯುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಜೂನ್ 21ರಂದು ನೀಟ್ ಮರುಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ, ಟೆಲಿಗ್ರಾಮ್ ಆ್ಯಪ್‌ನ ಬಳಕೆಯನ್ನು ಭಾರತದಲ್ಲಿ ಜೂನ್ 22ರವರೆಗೆ ನಿರ್ಬಂಧಿಸಲಾಗಿದೆ.
ಹಾಗಾದರೆ, ಸರಕಾರ ಇನ್ನು ವಾಟ್ಸ್‌ಆ್ಯಪನ್ನು ನಿರ್ಬಂಧಿಸುವುದೇ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ‘‘ಅಪರಾಧಿಯನ್ನು ಹಿಡಿಯುವ ಬದಲು ಸಂತ್ರಸ್ತನ ಬಾಯಿ ಮುಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎನ್ನುವುದನ್ನು ಟೆಲಿಗ್ರಾಮ್ ಮೇಲಿನ ನಿರ್ಬಂಧವು ತೋರಿಸುತ್ತದೆ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘‘ಕಳ್ಳನನ್ನು ಹಿಡಿಯುವ ಬದಲು, ಸಂತ್ರಸ್ತನ ಮನೆ ಬಾಗಿಲಿಗೆ ಬೀಗ ಹಾಕಿದಂತೆ. ಲಕ್ಷಾಂತರ ವಿದ್ಯಾರ್ಥಿಗಳು ವರ್ಷಗಳಿಂದ ಟೆಲಿಗ್ರಾಮ್ ಮೂಲಕ ಅಧ್ಯಯನ ಮಾಡುತ್ತಿದ್ದಾರೆ. ಅದರ ಮೂಲಕ ನೋಟ್ಸ್, ಪರೀಕ್ಷಾ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ, ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಮತ್ತು ಚರ್ಚೆಗಳನ್ನು ನಡೆಸುತ್ತಿದ್ದಾರೆ. ಈ ಸೌಲಭ್ಯಗಳನ್ನು ಕಿತ್ತುಕೊಂಡರೆ ಪ್ರಶ್ನೆಪತ್ರಿಕೆ ಸೋರಿಕೆಗಳು ಹೇಗೆ ನಿಲ್ಲುತ್ತವೆ?‘‘ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇಂಥ ಕ್ರಮಗಳು ಸಮರ್ಪಕವಾಗಿರುತ್ತವೆ ಎನ್ನುವ ಯಾವುದೇ ಖಾತರಿಯಿಲ್ಲ ಎಂದು ಹೇಳಿದ ಅವರು, ನೀಟ್ ಮರುಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ‘‘ನಾಟಕೀಯ’’ವಾಗಿವೆ ಎಂದು ಬಣ್ಣಿಸಿದರು. ‘‘ಮೋದಿಯವರೇ, ಈ ನಾಟಕಗಳನ್ನು ಬಿಡಿ. ಮಾಫಿಯವನ್ನು ಮಟ್ಟಹಾಕಿ, ವಿದ್ಯಾರ್ಥಿಗಳನ್ನಲ್ಲ’’ ಎಂದು ಅವರು ಹೇಳಿದರು.
ಸೋರಿಕೆ ತಡೆಯುವ ನೈಜ ಉದ್ದೇಶವೇ ಇಲ್ಲ: ಕೇಜ್ರಿವಾಲ್
ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ‘‘ಅಸಂಬದ್ಧ’’ವಾಗಿವೆ ಎಂದು ಅಭಿಪ್ರಾಯಪಟ್ಟಿರುವ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಈ ಕ್ರಮಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳನ್ನು ತಡೆಗಟ್ಟುವ ನೈಜ ಉದ್ದೇಶವೇ ಇಲ್ಲ ಎಂದು ಹೇಳಿದ್ದಾರೆ.
‘‘ಸೇನಾ ಹಡಗುಗಳಲ್ಲಿ ಪ್ರಶ್ನೆಪತ್ರಿಕೆಗಳ ಸಾಗಾಟ, ಟೆಲಿಗ್ರಾಮ್ ಮುಚ್ಚುವುದು- ಇವುಗಳು ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದೇ? ಖಂಡಿವಾಗಿಯೂ ಇಲ್ಲ, ಪ್ರಶ್ನೆಪತ್ರಿಕೆ ಸೋರಿಕೆಯು ನೂರಾರು ಕೋಟಿಗಟ್ಟಳೆ ರೂಪಾಯಿ ಉದ್ಯಮವಾಗಿದೆ. ಹಣ ನೇರವಾಗಿ ಉನ್ನತ ಸ್ಥಾನದಲ್ಲಿರುವವರಿಗೆ ಹೋಗುತ್ತದೆ. ಸೋರಿಕೆ ನಿಲ್ಲಿಸಿದರೆ ಶಾಸಕರು, ಸಂಸದರನ್ನು ಖರೀದಿಸಲು ಹಣ ಎಲ್ಲಿಂದ ಬರುತ್ತದೆ?’’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
