7 ದಿನಗಳಲ್ಲಿ ಸಮಿತಿ ತನ್ನ ವರದಿ ಸಲ್ಲಿಸಲು ಸೂಚನೆ
ಡೆಹ್ರಾಡೂನ್: ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪಗಳ ಬೆನ್ನಲ್ಲೇ, ಬದರಿನಾಥ ದೇಗುಲದಲ್ಲೂ ಇಂತಹದ್ದೇ ಆರೋಪಗಳು ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಅಕ್ರಮಗಳ ಆರೋಪ ಚರ್ಚೆಯಾಗುತ್ತಿದ್ದ ಬೆನ್ನಲ್ಲೇ, ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ (BKTC) ಈ ವಿಷಯದ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಸಮಿತಿ ರಚಿಸಿದೆ.
ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು, ನ್ಯಾಯಯುತವಾಗಿ ತನಿಖೆ ನಡೆಸಲು 4 ಸದಸ್ಯರ ತನಿಖಾ ಸಮಿತಿಯನ್ನ ರಚಿಸಿದ್ದಾರೆ. 7 ದಿನಗಳಲ್ಲಿ ಸಮಿತಿ ತನ್ನ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೋಹನ್ ಸಿಂಗ್ ರಂಗದ್ ಹೇಳಿದ್ದಾರೆ.
ಜುಲೈ 2 ರಿಂದಲೂ ಸೋಷಿಯಲ್ ಮೀಡಿಯಾದಲ್ಲಿ (Social Media) ಪ್ರಸಾರವಾಗುತ್ತಿರುವ ಆರೋಪಗಳನ್ನ ದೇವಾಲಯ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ದೇವಾಲಯದ ಆವರಣದ ಸಿಸಿಟಿವಿ ದೃಶ್ಯಾವಳಿಗಳು, ಸಂಬಂಧಿತ ನೌಕರರ ಹೇಳಿಕೆಗಳು ಮತ್ತು ಲಭ್ಯವಿರುವ ಇತರ ಸಾಕ್ಷ್ಯಗಳ ಆಧಾರದ ಮೇಲೆ ಸಮಿತಿಯು ತನಿಖೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಮಾತನಾಡಿ, ತಮ್ಮ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಳ್ಳುವ ಉದ್ಯೋಗಿ ವಾಸ್ತವವಾಗಿ ದೇವಸ್ಥಾನ ಸಮಿತಿಯ ನಿಯಮಿತ ಸರ್ಕಾರಿ ಉದ್ಯೋಗಿಯೇ ಹೊರತು ಅವರ ಆಪ್ತ ಕಾರ್ಯದರ್ಶಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮಗಳು ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ತನಿಖಾ ಸಮಿತಿಯು ತನ್ನ ವರದಿ ಸಲ್ಲಿಸಿದ ನಂತರ ಯಾವುದೇ ಉದ್ಯೋಗಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939 ಮತ್ತು ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ಅವರ ವಿರುದ್ಧ ಇಲಾಖಾ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಸೋಹನ್ ಸಿಂಗ್ ರಂಗದ್ ಹೇಳಿದ್ದಾರೆ. ಈ ಮಧ್ಯೆ ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದಂತೆ ಮತ್ತು ವದಂತಿಗಳನ್ನು ಪಸರಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
