ಇಂಟರ್ನೆಟ್ ಇಲ್ಲ, ಸ್ಮಾರ್ಟ್‌ಫೋನ್ ಇಲ್ಲ...! ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಕನ್ನಡಿಗ ಅವೈಸ್ ಅಹ್ಮದ್!

ಕರ್ನಾಟಕದ ಪುಟ್ಟ ಹಳ್ಳಿಯ ಬಾಲಕ ಕಟ್ಟಿದ 'ಪಿಕ್ಸೆಲ್'ಗೆ ನಾಸಾ ಮನ್ನಣೆ!

ಚಿಕ್ಕಮಗಳೂರು: ಕರ್ನಾಟಕದ ಒಂದು ಪುಟ್ಟ ಹಳ್ಳಿಯಲ್ಲಿ ಬೆಳೆದ ಬಾಲಕನಿಗೂ ಇಂಟರ್ನೆಟ್ ಇರಲಿಲ್ಲ, ಸ್ಮಾರ್ಟ್‌ಫೋನ್ ಇರಲಿಲ್ಲ, ಬಾಹ್ಯಾಕಾಶದ ಬಗ್ಗೆ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯೂಟ್ಯೂಬ್‌ ಸಹ ಇರಲಿಲ್ಲ. ಅವನ ಬಳಿ ಇದ್ದದ್ದು ತಂದೆ ಮನೆಗೆ ತರುತ್ತಿದ್ದ ವಿಶ್ವಕೋಶಗಳು (Encyclopaedias) ಮತ್ತು ಪ್ರಶ್ನೆಗಳನ್ನು ಕೇಳುವುದನ್ನು ಎಂದಿಗೂ ನಿಲ್ಲಿಸದ ಕುತೂಹಲಭರಿತ ಮನಸ್ಸು.

ಇದು ನಮ್ಮೆಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ ಸಾಧಕ ಅವೈಸ್ ಅಹ್ಮದ್. ಚಿಕ್ಕಮಗಳೂರಿನ ಅಲ್ದೂರು ಎಂಬ ಪುಟ್ಟ ಹಳ್ಳಿಯಲ್ಲಿ ಬೆಳೆದ ಬಾಲಕನೊಬ್ಬ, ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾನೆ. ಆತನೇ ‘ಪಿಕ್ಸೆಲ್’ (Pixxel) ಸಂಸ್ಥೆಯ ಸಹ-ಸಂಸ್ಥಾಪಕ ಅವೈಸ್ ಅಹ್ಮದ್.

ಇಂದು ಅವರು ಸ್ಥಾಪಿಸಿದ ಪಿಕ್ಸೆಲ್ (Pixxel) ಕಂಪನಿಯ ಉಪಗ್ರಹಗಳು ಭೂಮಿಯ ಸುತ್ತ ಕಕ್ಷೆಯಲ್ಲಿ ಸಂಚರಿಸುತ್ತಿದ್ದು, ಸಾಮಾನ್ಯ ಉಪಗ್ರಹಗಳಿಂದ ಪತ್ತೆಹಚ್ಚಲು ಕಷ್ಟವಾಗುವ ಬೆಳೆಗಳ ಒತ್ತಡ (Crop Stress), ಮೀಥೇನ್ ಅನಿಲ ಸೋರಿಕೆ, ಕೈಗಾರಿಕಾ ಮಾಲಿನ್ಯ ಹಾಗೂ ಪರಿಸರದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.

ಬಾಲ್ಯದ ಕುತೂಹಲದಿಂದ ಆರಂಭವಾದ ಈ ಪಯಣ ಇಂದು ಭಾರತದ ಅತ್ಯಂತ ಯಶಸ್ವಿ ಮತ್ತು ಹೆಮ್ಮೆಯ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳಲ್ಲಿ ಒಂದಾಗಿ ಪಿಕ್ಸೆಲ್ ಅನ್ನು ಬೆಳೆಸಿದೆ. ಅಲ್ಲದೆ, ಈ ಸಂಸ್ಥೆ ನಾಸಾ (NASA) ಜೊತೆಗೆ ಒಪ್ಪಂದ ಸಾಧಿಸುವ ಮೂಲಕ ಜಾಗತಿಕ ಮಟ್ಟದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

ಅವೈಸ್ ಅಹ್ಮದ್ ಬಾಲ್ಯವು ಈಗಿನ ಮಕ್ಕಳಂತೆ ಇರಲಿಲ್ಲ. 8ನೇ ತರಗತಿಯವರೆಗೆ ಕನಿಷ್ಟ ಇಂಟರ್‌ನೆಟ್‌ ಸೌಲಭ್ಯ ಕೂಡ ಇರಲಿಲ್ಲ. ಆದರೆ, ಅವರ ತಂದೆ ತರುತ್ತಿದ್ದ ವಿಜ್ಞಾನ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎನ್ಸೈಕ್ಲೋಪೀಡಿಯಾಗಳೇ ಅವರ ಮಾಹಿತಿ ಕಣಜಗಳಾದವು. ಪುಸ್ತಕಗಳಲ್ಲಿನ ಚಿತ್ರಗಳು, ಗ್ರಹಗಳ ಮಾಹಿತಿ ಮತ್ತು ಬ್ರಹ್ಮಾಂಡದ ರಹಸ್ಯಗಳು ಅವರಲ್ಲಿ ಬಾಹ್ಯಾಕಾಶದ ಬಗ್ಗೆ ಆಳವಾದ ಕುತೂಹಲ ಮೂಡಿಸಿದವು.

ಬಿಟ್ಸ್ ಪಿಲಾನಿಯಲ್ಲಿ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಿದ ಅವೈಸ್, ಅಲ್ಲಿನ ‘ಟೀಮ್ ಅನಂತ್’ (Team Anant) ಮೂಲಕ ಇಸ್ರೋದ ಸ್ಯಾಟಲೈಟ್ ಯೋಜನೆಗಳಲ್ಲಿ ಭಾಗವಹಿಸಿದರು. ನಂತರ ಹೈಪರ್‌ಲೂಪ್ ಇಂಡಿಯಾದ ಇಂಜಿನಿಯರಿಂಗ್ ಮುಖ್ಯಸ್ಥರಾಗಿ ಸ್ಪೇಸ್‌ಎಕ್ಸ್ (SpaceX) ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರು.

2018ರಲ್ಲಿ ತಮ್ಮ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಸೇರಿ, ಬೆಳೆಗಳ ವಿಶ್ಲೇಷಣೆಗಾಗಿ ಸೂಕ್ಷ್ಮ ಸ್ಯಾಟಲೈಟ್ ಚಿತ್ರಗಳ ಕೊರತೆಯನ್ನು ಗುರುತಿಸಿದರು. ಈ ಸಮಸ್ಯೆಗೆ ಪರಿಹಾರವಾಗಿ 2019ರಲ್ಲಿ ‘ಪಿಕ್ಸೆಲ್’ ಸಂಸ್ಥೆಯನ್ನು ಹುಟ್ಟುಹಾಕಿದರು. ಆರಂಭದ ದಿನಗಳಲ್ಲಿ ತಂದೆಯ ಬಳಿ ಸಾಲ ಪಡೆದು, ತಿಂಗಳಿಗೆ ಕೇವಲ ₹10,000ದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದ ಈ ಜೋಡಿ, ಇಂದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಿದೆ.

ಗೂಗಲ್, ರಾಡಿಕಲ್ ವೆಂಚರ್ಸ್ ಮತ್ತು ಲೈಟ್‌ಸ್ಪೀಡ್‌ನಂತಹ ಜಾಗತಿಕ ದಿಗ್ಗಜರು ಅವರ ʼಪಿಕ್ಸೆಲ್‌ʼ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದು, ಸುಮಾರು ₹900 ಕೋಟಿ ($95 ದಶಲಕ್ಷ) ಬಂಡವಾಳವನ್ನು ಪಿಕ್ಸೆಲ್ ಸಂಗ್ರಹಿಸಿದೆ.

2025ರಲ್ಲಿ ಕಕ್ಷೆಗೆ ಸೇರಿದ ಪಿಕ್ಸೆಲ್‌ನ ಆರು ‘ಫೈರ್‌ಫ್ಲೈ’ (Firefly) ಉಪಗ್ರಹಗಳು, 250ಕ್ಕೂ ಹೆಚ್ಚು ಸ್ಪೆಕ್ಟ್ರಲ್ ಬ್ಯಾಂಡ್‌ಗಳ ಮೂಲಕ ಭೂಮಿಯನ್ನು ವೀಕ್ಷಿಸುತ್ತವೆ. ಇದು ಬೆಳೆಗಳ ರೋಗಪತ್ತೆ, ಮೀಥೇನ್ ಅನಿಲ ಸೋರಿಕೆ ಪತ್ತೆ ಮತ್ತು ಅಕ್ರಮ ಗಣಿಗಾರಿಕೆ ತಡೆಯಲು ನೆರವಾಗುತ್ತದೆ.

ಪಿಕ್ಸೆಲ್ ಸಂಸ್ಥೆಯು ನಾಸಾ (NASA) ಜೊತೆ ಗುತ್ತಿಗೆ ಪಡೆದ ಮೊದಲ ಭಾರತೀಯ ಬಾಹ್ಯಾಕಾಶ ಸ್ಟಾರ್ಟ್-ಅಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಅಮೆರಿಕದ ನ್ಯಾಷನಲ್ ರಿಕಾನ್ನಿಸೆನ್ಸ್ ಆಫೀಸ್ (NRO) ಜೊತೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಅವೈಸ್ ಅಹ್ಮದ್ ಅವರು ಫೋರ್ಬ್ಸ್‌ನ ’30 ಅಂಡರ್ 30′ ಮತ್ತು ಎಂಐಟಿ (MIT) ‘ಇನ್ನೊವೇಟರ್ಸ್ ಅಂಡರ್ 35’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟೈಮ್ ಮ್ಯಾಗಜೀನ್‌ನ ‘100 ಬೆಸ್ಟ್ ಇನ್ವೆನ್ಷನ್ಸ್ ಆಫ್ 2023’ ಪಟ್ಟಿಯಲ್ಲಿ ಪಿಕ್ಸೆಲ್ ಸ್ಥಾನ ಪಡೆದಿದೆ. ಸದ್ಯ ಬೆಂಗಳೂರು ಮತ್ತು ಲಾಸ್ ಏಂಜಲೀಸ್ ನಡುವೆ ಕಾರ್ಯನಿರ್ವಹಿಸುತ್ತಿರುವ ಅವೈಸ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.