ನಟ ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು; ಪ್ರಕರಣವೇನು...?

ಬೆಂಗಳೂರು: ಮೂರು ರಾಜ್ಯಗಳಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರಿಗೆ ಬೆಂಗಳೂರು ಕೋರ್ಟ್ ಶುಕ್ರವಾರ ಬಿಗ್ ರಿಲೀಫ್ ನೀಡಿದ್ದು, ನಟನಿಗೆ ಜಾಮೀನು ಮಂಜೂರು ಮಾಡಿದೆ.

ನಟ ಪ್ರಕಾಶ್ ರಾಜ್ ವಿರುದ್ಧ ನಾಲ್ಕು ವೋಟರ್ ಐಡಿ ಹೊಂದಿರುವ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ವಾರಂಟ್ ರೀಕಾಲ್ ಮಾಡಿಸಲು ನಟ ಕೋರ್ಟ್ಗೆ ಹಾಜರಾಗಿದ್ದರು. 

ಇಂದು ಬೆಳಗ್ಗೆ ವಾರಂಟ್ ರೀಕಾಲ್‌ಗೆ ನಟ ಪ್ರಕಾಶ್ ರಾಜ್ ವಕೀಲರು ಅರ್ಜಿ ಸಲ್ಲಿಸಿದ್ದರು. ಜಾಮೀನು ಪಡೆಯಲು ನಟ ಖುದ್ದು ಕೋರ್ಟ್‌ಗೆ ಹಾಜರಾಗಿದ್ದರು. ಅರ್ಜಿ ವಿಚಾರಣೆ ನಡೆಸಿದ 48ನೇ ಎಸಿಜೆಎಂ ಕೋರ್ಟ್ ನಟನಿಗೆ ಜಾಮೀನು ಮಂಜೂರು ಮಾಡಿದೆ. 4 ಸಾವಿರ ನಗದು ಶ್ಯೂರಿಟಿ ನೀಡಲು ಕೋರ್ಟ್ ಸೂಚಿಸಿದೆ. ಬಳಿಕ ಪ್ರಕಾಶ್ ರಾಜ್ ಕೋರ್ಟ್‌ನಿಂದ ನಿರ್ಗಮಿಸಿದರು. ಪ್ರಕಾಶ್ ರಾಜ್ ನಾಲ್ಕು ವೋಟರ್ ಐಡಿ ಹೊಂದಿದ್ದರೆಂದು ಪಿಸಿಆರ್ ದಾಖಲಿಸಲಾಗಿತ್ತು. ದಿಲೀಪ್ ರಾಜ್ ಎಂಬವರು ನಟನ ವಿರುದ್ಧ ಕೇಸ್ ಹೂಡಿದ್ದರು.