ಮಲ್ಪೆ; ಕೇರಳ ಸಮಾಜಮ್ ಉಡುಪಿ ವತಿಯಿಂದ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ

ಉಡುಪಿ: ಕೇರಳ ಸಮಾಜಮ್ ಉಡುಪಿ ವತಿಯಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು.

ಮಲಯಾಳಂ ತಿಂಗಳಾದ ಕರ್ಕಿಡಕಂನ ಅಮಾವಾಸ್ಯೆಯ ದಿನವನ್ನು ಕರ್ಕಿಡಕವಾವು ಎಂದು ಆಚರಿಸಲಾಗುತ್ತದೆ. ಈ ದಿನ ಅಗಲಿದ ಪಿತೃಗಳಿಗೆ ಪಿಂಡ ಪ್ರದಾನ ಮಾಡುವ ಸಂಪ್ರದಾಯ ಕೇರಳದಲ್ಲಿ ರೂಢಿಯಲ್ಲಿದೆ. ಕೇರಳದ ವಿವಿಧೆಡೆ ಸಾವಿರಾರು ಮಂದಿ ಈ ದಿನದಂದು ಪಿತೃಗಳಿಗೆ ಬಲಿತರ್ಪಣ ನೆರವೇರಿಸುತ್ತಾರೆ.


ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳದವರಿಗೆ ಕೇರಳಕ್ಕೆ ತೆರಳಿ ಬಲಿತರ್ಪಣ ನೆರವೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇರಳ ಸಮಾಜಮ್ ಕಳೆದ ಎರಡು ವರ್ಷಗಳಿಂದ ಮಲ್ಪೆ ಕಡಲ ತೀರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಕ್ಯಾಲಿಕಟ್‌ನಿಂದ ಆಗಮಿಸಿದ್ದ ಹಿರಿಯ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಾಗವಹಿಸಿದ್ದವರು ಅಗಲಿದ ಕುಟುಂಬ ಸದಸ್ಯರಿಗೆ ಪಿಂಡ ಪ್ರದಾನ ನೆರವೇರಿಸಿದರು. ನಂತರ ಸಮುದ್ರ ಸ್ನಾನ ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಕೇರಳ ಸಮಾಜ ಬಾಂಧವರು ಭಾಗವಹಿಸಿದ್ದರು.