ಆಕರ್ಷಕ ಟ್ಯಾಬ್ಲೊಗಳು, ಸಾಂಸ್ಕೃತಿಕ ಕಲಾತಂಡಗಳ ಮೆರುಗು; ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ
ಉಚ್ಚಿಲ: ಉಡುಪಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಐದನೇ ವರ್ಷದ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಬುಧವಾರ ನಡೆಯಲಿದ್ದು, ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.
ಮಧ್ಯಾಹ್ನ 2.30ಕ್ಕೆ ಶಾರದಾ ಮಾತೆ ಹಾಗೂ ನವದುರ್ಗೆಯರ ವಿಸರ್ಜನಾ ಪೂಜೆ, 3ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು, ರಾತ್ರಿ ಕಾಪು ದೀಪಸ್ತಂಭದ ಬಳಿ ಜಲಸ್ತಂಭನಗೊಳ್ಳಲಿದೆ. ಈ ಸಂದರ್ಭದಲ್ಲಿ ಕಾಶಿಯಿಂದ ಆಗಮಿಸುವ ಅರ್ಚಕರಿಂದ ಗಂಗಾರತಿ ನೆರವೇರಲಿದೆ.
ಶೋಭಾಯಾತ್ರೆಯಲ್ಲಿ ಬಿರುದಾವಳಿ, ಬಣ್ಣದ ಕೊಡೆಗಳು, ಕೊಂಬು-ಕಹಳೆ, ಡೋಲು, ವಿವಿಧ ಬ್ಯಾಂಡ್ಗಳು, ನಾಗಸ್ವರ, ಸ್ಯಾಕ್ಸೋಫೋನ್, ನಾಸಿಕ್ ಬ್ಯಾಂಡ್, ಚೆಂಡೆ, ದೇವರ ಗೊಂಬೆಗಳು, ಕುಣಿತ ಭಜನೆ, ಭಜನಾ ತಂಡಗಳು, ಹುಲಿಕುಣಿತ, ಬೇಡರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಲಿವೆ.
ಇದರೊಂದಿಗೆ ಮಹಿಷಮರ್ದಿನಿ, ಶಿವಾಜಿ, ಜಟಾಯು, ರಾವಣ, ಸೀತೆ, ಧನಲಕ್ಷ್ಮೀ ದೇವಿ, ಮಹಿಷಾಸುರ ವಧೆ, ಹನುಮಂತ, ರಾಮ-ಲಕ್ಷ್ಮಣ, ನವದುರ್ಗೆಯರು, ಮಕ್ಕಳ ಶಾರದೆ, ಪರಿಸರ ಜಾಗೃತಿ ಹಾಗೂ ವಿವಿಧ ಪೌರಾಣಿಕ ಮತ್ತು ಧಾರ್ಮಿಕ ವಿಷಯಗಳನ್ನು ಬಿಂಬಿಸುವ ಟ್ಯಾಬ್ಲೊಗಳು ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಲಿವೆ. ಮಹಾಲಕ್ಷ್ಮೀ ದೇವಸ್ಥಾನ, ಬೆಣ್ಣೆಕುದ್ರು, ಬಗ್ವಾಡಿ, ಉಚ್ಚಿಲ ಮಹಾಲಕ್ಷ್ಮೀ, ಮಾಧವ ಮಂಗಲ ಹಾಗೂ ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರತಿರೂಪಗಳೂ ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ.
ಲಕ್ಷಾಂತರ ಭಕ್ತರ ನಿರೀಕ್ಷೆ: ಡಾ.ಜಿ.ಶಂಕರ್
ದಸರಾ ಉತ್ಸವ ಆರಂಭವಾದಾಗಿನಿಂದ ವರ್ಷದಿಂದ ವರ್ಷಕ್ಕೆ ಭಕ್ತರ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಆರಂಭದಲ್ಲಿ ನಾಲ್ಕೈದು ಲಕ್ಷದಷ್ಟಿದ್ದ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಇದೀಗ ಹತ್ತು ಲಕ್ಷ ದಾಟಿದೆ. ಬುಧವಾರದ ಶೋಭಾಯಾತ್ರೆಯಲ್ಲಿಯೂ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಹಾಗೂ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ತಿಳಿಸಿದ್ದಾರೆ.
ಜಲಸ್ತಂಭನದ ವೇಳೆ ಕಾಶಿಯಿಂದ ಆಗಮಿಸುವ ಅರ್ಚಕರಿಂದ ನಡೆಯಲಿರುವ ಗಂಗಾರತಿ ವಿಶೇಷ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇಂದು ಮಧ್ಯಾಹ್ನ 3.30ಕ್ಕೆ ಶೋಭಾಯಾತ್ರೆ: ಜಯ ಸಿ. ಕೋಟ್ಯಾನ್
ಉಡುಪಿ ಉಚ್ಚಿಲ ದಸರಾ ಶೋಭಾಯಾತ್ರೆ ಬುಧವಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಮಧ್ಯರಾತ್ರಿ 12ರೊಳಗೆ ಮುಕ್ತಾಯಗೊಳಿಸಲು ಸಿದ್ಧತೆ ನಡೆಸಲಾಗಿದೆ. ಶೋಭಾಯಾತ್ರೆಯಲ್ಲಿ ಎರಡು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಆಕರ್ಷಕ ವಿದ್ಯುತ್ ದೀಪಾಲಂಕಾರ, ಕುಣಿತ ಭಜನೆ, ನೀರಿನ ವ್ಯವಸ್ಥೆ, ಶುಚಿತ್ವ ವಾಹನ ಹಾಗೂ ಅಲ್ಲಲ್ಲಿ ಕುಡಿಯುವ ನೀರು ಮತ್ತು ಪಾನೀಯಗಳ ವ್ಯವಸ್ಥೆ ಮಾಡಲಾಗಿದೆ. ಸಮಸ್ತ ಮೊಗವೀರರು ಉತ್ಸವದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅ.21ರಂದು ಮೀನುಗಾರಿಕೆಗೂ ರಜೆ ಸಾರಲಾಗಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ತಿಳಿಸಿದ್ದಾರೆ.
250 ಸ್ವಯಂಸೇವಕರ ನಿಯೋಜನೆ: ವಿನಯ್ ಕರ್ಕೇರ
ಶಾರದಾ ಮಾತೆ ಹಾಗೂ ನವದುರ್ಗೆಯರ ವಿಸರ್ಜನಾ ಶೋಭಾಯಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೇವಸ್ಥಾನದ ಸ್ವಾಗತ ಗೋಪುರದ ಮುಂಭಾಗದಲ್ಲಿ ಗಣ್ಯರು ಹಾಗೂ ಡ್ರೋನ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಟ್ಯಾಬ್ಲೊಗಳು ಸೇರಿದಂತೆ ಸುಮಾರು ನೂರು ವಾಹನಗಳು ಮೆರವಣಿಗೆಯಲ್ಲಿ ಸಾಗಲಿವೆ ಎಂದು ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ತಿಳಿಸಿದ್ದಾರೆ.
ಶೋಭಾಯಾತ್ರೆಯ ಸುಗಮ ನಿರ್ವಹಣೆ ಹಾಗೂ ಪೊಲೀಸರಿಗೆ ಸಹಕಾರ ನೀಡುವ ಉದ್ದೇಶದಿಂದ ಸಮವಸ್ತ್ರಧಾರಿ 250 ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, ಉತ್ಸವ ಯಶಸ್ವಿಗೊಳಿಸಲು ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಶೋಭಾಯಾತ್ರೆ ಹಿನ್ನೆಲೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ
ಅಕ್ಟೋಬರ್ 21ರಂದು ನಡೆಯಲಿರುವ ಉಡುಪಿ ಉಚ್ಚಿಲ ದಸರಾ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸಂಚಾರ ಮಾರ್ಪಾಡಿನ ಆದೇಶ ಹೊರಡಿಸಿದ್ದಾರೆ.
ಉಡುಪಿ–ಮಂಗಳೂರು ಮಾರ್ಗದ ಭಾರಿ ವಾಹನಗಳು: ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ಕಟಪಾಡಿ–ಶಿರ್ವ–ಬೆಳ್ಳಣ್–ಪಡುಬಿದ್ರಿ ಬದಲಿ ಮಾರ್ಗದಲ್ಲಿ ಸಂಚರಿಸಬೇಕು.
ಉಡುಪಿಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು: ಕಟಪಾಡಿ–ಶಿರ್ವ–ಬೆಳ್ಳಣ್–ಮುಂಡೂರು ಮಾರ್ಗ ಬಳಸಬೇಕು.
ಟ್ರಕ್, ಲಾರಿ, ಟ್ಯಾಂಕರ್ ಸೇರಿದಂತೆ ಭಾರಿ ವಾಹನಗಳು: ರಾತ್ರಿ 9ರವರೆಗೆ ಕುಂದಾಪುರ ಹಾಗೂ ಉಡುಪಿ ವ್ಯಾಪ್ತಿಯ ಟ್ರಕ್ ಬೇಗಳಲ್ಲಿ ನಿಲ್ಲಿಸಿ, ಬಳಿಕ ಸಂಚಾರ ಮುಂದುವರಿಸಬೇಕು.
ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕ ಬಸ್ಗಳು: ರಾತ್ರಿ 9ರ ಬಳಿಕ ಉಡುಪಿಯಿಂದ ಸಂಚರಿಸಬಹುದು.
ಶೋಭಾಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ಮಾರ್ಪಾಡುಗಳನ್ನು ಗಮನಿಸಿ, ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
















