
ಬೆಂಗಳೂರಿನಲ್ಲಿ ಎಮ್ಮೆಗಳಿಂದಾಗಿ ಹೆಚ್ಚುತ್ತಿರುವ ಟ್ರಾಫಿಕ್ ಕಿರಿಕಿರಿ; ದೂರು ನೀಡಿದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಮ್ಮೆಗಳಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿ-ಕಿರಿ ಹೆಚ್ಚುತ್ತಿದ್ದು, ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಸಮಸ್ಯೆಯನ್ನು ಪರಿಹರಿಸುವಂತೆ ಟ್ವಿಟರ್ ಮೂಲಕ ಪೊಲೀಸ್ ಮೊರೆ ಹೋಗಿದ್ದಾರೆ.
ಬೆಳಗ್ಗಿನ ವೇಳೆ ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ತೊಂದರೆಯಾಗುತ್ತಿದೆ. ಎಮ್ಮೆಗಳಿಂದ ಆಫೀಸ್‌ಗೆ ಹೋಗುವ ಮಾರ್ಗಮಧ್ಯೆ ಭಾರಿ ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿದೆ ಎಂದು ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು ನಗರದ ಕಸವನಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಐಟಿ ಕಂಪನಿಗಳು ಕೇಂದ್ರೀಕೃತವಾಗಿದ್ದು, ಕಚೇರಿಗೆ ಹೋಗುವ ಬೆಳಗ್ಗಿನ ಜಾವದಲ್ಲೇ ಹಿಂಡು- ಹಿಂಡಾಗಿ ಎಮ್ಮೆಗಳು ರಸ್ತೆಯಲ್ಲೇ ಓಡಾಟ ನಡೆಸುತ್ತ ಇರುತ್ತವೆ. ಈ ವೇಳೆ ಎಮ್ಮೆಗಳು ಕಾರು, ಬೈಕ್, ಬಸ್, ಬೈಕ್‌ಗಳು ಸೇರಿ ಎಲ್ಲ ವಾಹನಗಳಿಗೆ ಅಡ್ಡ ಬಂದು ನಿಲ್ಲುತ್ತವೆ. ಇದರಿಂದ ನಿತ್ಯವೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ ಎಂದು ಅವಲತ್ತುಕೊಂಡಿದ್ದಾರೆ.
ಟ್ರಾಫಿಕ್ ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಲು ಟೆಕ್ಕಿಗಳು ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.