
ಬಿಜೆಪಿಯಿಂದ ಮತದಾರರಿಗೆ ಲಂಚದ ಆಮಿಷ; ಜಾರಕಿಹೊಳಿ, ಬೊಮ್ಮಾಯಿ, ಕಟೀಲ್, ಜೆಪಿ ನಡ್ಡಾ ವಿರುದ್ಧ ಕಾಂಗ್ರೆಸ್ ನಿಂದ ದೂರು
ಬೆಂಗಳೂರು: ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿದ್ದಂತೆ ಮತಗಳಿಕೆ ಉದ್ದೇಶದಿಂದ ಮತದಾರರಿಗೆ ಲಂಚದ ಆಮಿಷವೊಡ್ಡಿರುವ ಆರೋಪದ ಮೇಲೆ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡ, ಸಿಎಂ ಬಸವಾರಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಪಕ್ಷ ಪೊಲೀಸರಿಗೆ ದೂರು ನೀಡಿದೆ.
ಈ ಬಗ್ಗೆ KPCC ಅಧ್ಯಕ್ಷ ಡಿಕೆಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ. ದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ಹೆಸರು ಉಲ್ಲೇಖಿಸಲಾಗಿದೆ. ಇವರನ್ನು ಕೂಡಲೇ FRI ದಾಖಲು ಮಾಡಿ ಎಲ್ಲರನ್ನು ಬಂಧನ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಗೋಕಾಕ್ BJP ಶಾಸಕ ಜಾರಕಿಹೊಳಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮತಕ್ಕೆ 6,000 ರೂಪಾಯಿ ನೀಡುವುದಾಗಿ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿದ್ದರು. ಸೆ#ಕ್ಸ್ ಜಾ#ಲವೊಂದರಲ್ಲಿ ಸಿಲುಕಿದ್ದ ಜಾರಕಿಹೊಳಿ, 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾತನಾಡಿದ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು BJP ಹಾಳು ಮಾಡುತ್ತಿದೆ. ಓಟಿಗಾಗಿ ಜನರಿಗೆ ಆಮಿಷ ಒಡ್ಡುತ್ತಿದ್ದಾರೆ. ತಾವು ಪಡೆದಿರುವ 40% ಕಮಿಷನ್‌ನಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಚುನಾವಣೆಗೆ ಹಂಚಲು ಬಿಜೆಪಿಯವರು ಸಿದ್ದತೆ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೋಳಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರತಿ ಮತಕ್ಕೆ 6 ಸಾವಿರ ಕೊಡ್ತೀವಿ ಅಂತಾ ಹೇಳಿದ್ದಾರೆ. ರಾಜ್ಯದಲ್ಲಿರುವ 5 ಕೋಟಿ ಮತದಾರರಿಗೆ 6 ಸಾವಿರದಂತೆ 30 ಸಾವಿರ ಕೋಟಿ ಹಣ ಹಂಚಲು BJP ಮುಂದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದು ಕೇಂದ್ರ BJP ವರಿಷ್ಠರೇ ರೂಪಿಸಿರುವ ಪಿತೂರಿಯಾಗಿದ್ದು, CM, BJP ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೂ ಈ ಪಿತೂರಿಯಲ್ಲಿ ಭಾಗವಹಿಸಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.