
ಪ್ರಧಾನಿ ಮೋದಿ ಬೆಟ್ಟಿಂಗ್ ದಂಧೆ ನಡೆಸುವವರಿಗೆ, ಅಂಡರ್‌ವರ್ಲ್ಡ್ ಡಾನ್‌ಗಳಿಗೆ ತಲೆಬಾಗಿ ಕೈಮುಗಿದಿದ್ದು ನಾಚಿಗೇಡಿನ ಸಂಗತಿ: ಕುಮಾರಸ್ವಾಮಿ ಆಕ್ರೋಶ
ಹಾಸನ: ರವಿವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರಿಗೆ, ಕಾನೂನು ಬಾಹಿರ ಚಟುವಟಿಕೆ ನಡೆಸುವ ಅಂಡರ್‌ವರ್ಲ್ಡ್ ಡಾನ್‌ಗಳಿಗೆ ತಲೆಬಾಗಿ ಕೈಮುಗಿದಿದ್ದು, ಇದು ನಾಚಿಗೇಡಿನ ಸಂಗತಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರೌಡಿ ಶೀಟರ್ ಫೈಟರ್ ರವಿಗೆ ಮೋದಿ ಕೈಮುಗಿದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅಂಡರ್‌ವರ್ಲ್ಡ್ ಡಾನ್‌ಗಳಿಗೆ ಕೈ ಮುಗಿಯುವ ದೃಶ್ಯ ನೋಡಿದಾಗ ಕರ್ನಾಟಕದಲ್ಲಿ ಬಿಜೆಪಿಯ ಪರಿಸ್ಥಿತಿ ಯಾವ ದಯನೀಯ ಸ್ಥಿತಿಗೆ ಬಂದಿದೆ ಅನ್ನೋದು ಇದರಿಂದ ಗೊತ್ತಾಗಿದೆ. ಇದು ನಾಚಿಗೇಡಿನ ಸಂಗತಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಹಾಕಿದ್ದ ಉರಿಗೌಡ, ನಂಜೇಗೌಡ ಫ್ಲೆಕ್ಸ್ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆ ವ್ಯಕ್ತಿಗಳು ಟಿಪ್ಪುವನ್ನು ಕುತಂತ್ರದಿಂದ ಕೊಂದಿದ್ದಾರಾ ಅನ್ನೋದಕ್ಕೆ ಯಾವುದೇ ರೀತಿಯ ಇತಿಹಾಸವಿಲ್ಲ. ಈ ಇತಿಹಾಸ ಸೃಷ್ಟಿ ಮಾಡಿರುವುದು ಕರ್ನಾಟಕದ ಬಿಜೆಪಿಯವರು. ಇಂಥ ಇತಿಹಾಸವನ್ನು ಸೃಷ್ಟಿ ಮಾಡಿ, ನಮ್ಮ ಸಮಾಜದ ಇಬ್ಬರ ವ್ಯಕ್ತಿಗಳ ಹೆಸರನ್ನು ಇಟ್ಟಿರುವುದು ಒಕ್ಕಲಿಗ ಸಮಾಜಕ್ಕೆ ಮಾಡುತ್ತಿರುವ ಅಪಮಾನ. ಈ ಕಾರಣದಿಂದ ಒಕ್ಕಲಿಗ ಸಮುದಾಯ BJP ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಕರೆನೀಡಿದರು.