ಕೊನೆಯ ಗಳಿಗೆಯಲ್ಲಿ ಈಶ್ವರಪ್ಪಗೆ ಹೈಕಮಾಂಡ್ ಶಾಕ್; ಪುತ್ರನಿಗೆ ಕೈ ತಪ್ಪಿದ ಟಿಕೆಟ್: ಶಿವಮೊಗ್ಗಕ್ಕೆ ಚನ್ನಬಸಪ್ಪ, ಮಾನ್ವಿಗೆ ಬಿ.ವಿ.ನಾಯಕ್'ಗೆ ಟಿಕೆಟ್
Thursday, April 20, 2023
ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ಕೊನೆವರೆಗೂ ಉಳಿಸಿಕೊಂಡಿದ್ದ 2 ಕ್ಷೇತ್ರಗಳಿಗೆ ಕೊನೆಗೂ ಅಭ್ಯರ್ಥಿಗಳನ್ನು ಘೋಷಿಸಿದೆ.
ಈ ಬಾರಿಯ ಚುನಾವಣೆಗೂ ಮುನ್ನ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಕೆ.ಎಸ್.ಈಶ್ವರಪ್ಪರಿಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ನಿವೃತ್ತಿ ವೇಳೆ ತನ್ನ ಪುತ್ರ ಕಾಂತೇಶ್‌ಗೆ ಟಿಕೆಟ್ ನೀಡುವಂತೆ ಈಶ್ವರಪ್ಪ ಲಾಬಿ ನಡೆಸಿದ್ದರೂ, ಟಿಕೆಟ್ ಕೈತಪ್ಪಿದ್ದು, ಶಿವಮೊಗ್ಗ ಕ್ಷೇತ್ರಕ್ಕೆ ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆ ಆಗಿದೆ.
ಇದರಿಂದ ಕೊನೆಯ ಗಳಿಗೆಯಲ್ಲಿ ಈಶ್ವರಪ್ಪ ಆಸೆ ನಿರಾಸೆಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಚನ್ನಬಸಪ್ಪಗೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಬಿ.ವಿ.ನಾಯಕ್ ಅವರು ನಿನ್ನೆಯಷ್ಟೇ ಕಾಂಗ್ರೆಸ್ 'ಕೈ'ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಮಾನ್ವಿ ಕ್ಷೇತ್ರಕ್ಕೆ ನಾಯಕ್‌ಗೆ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಡುವಲ್ಲಿ ಸಚಿವ ಶ್ರೀರಾಮುಲು ಯಶಸ್ವಿಯಾಗಿದ್ದಾರೆ.