ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರಿಂದ ಸಂಭ್ರಮದ ಈದುಲ್ ಫಿತ್ರ್ ಆಚರಣೆ
ಉಡುಪಿ/ಮಂಗಳೂರು: ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಶನಿವಾರ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಉಡುಪಿ ನಗರ, ಕಣ್ಣಂಗಾರ್, ಪಡುಬಿದ್ರೆ, ಎರ್ಮಾಳ್, ಉಚ್ಚಿಲ, ಪೊಲ್ಯ, ಮೂಳೂರು, ಕಾಪು, ಬ್ರಹ್ಮಾವರ, ಕುಂದಾಪುರ, ಬೈಂದೂರ್, ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು. ಮುಸ್ಲಿಂ ಬಾಂಧವರು ಬೆಳಗ್ಗೆ ಅರ್ಹ ಬಡವರಿಗೆ ಫಿತರ್ ಝಕಾತ್ ನೀಡಿದ ಬಳಿಕ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಲಿ ನಮಾಜಿನಲ್ಲಿ ಪಾಲ್ಗೊಂಡರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಜ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಜ್ ಬಳಿಕ ಪರಸ್ಪರ ಈದುಲ್ ಫಿತ್ರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಡುಪಿ ನಗರದ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ್ರಶೀದ್ ನದ್ವಿ ನೇತೃತ್ವದಲ್ಲಿ ಹಾಗು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಧರ್ಮಗುರು ವೌಲಾನ ಕರಾರ್ ಹುಸೇನ್ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು.
ಗಂಗೊಳ್ಳಿಯ ಜುಮ್ಮಾ ಮಸೀದಿಯಲ್ಲಿ ಮೌಲಾನ ಮುಝಮ್ಮಿಲ್ ನದ್ವಿ, ಮೋಹಿದೀನ್ ಜುಮ್ಮಾ ಮಸೀದಿಯಲ್ಲಿ ಖತೀಬ್ ಮೌಲಾನ ಅಬ್ದುಲ್ ಕರೀಂ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನ ಅಬ್ದುಲ್ ಮತಿನ್ ಸಿದ್ದಿಕಿ ಅವರ ನೇತೃತ್ವದಲ್ಲಿ ವಿಶೇಷ ನಮಾಝ್ ನಿರ್ವಹಿಸಲಾಯಿತು. ಇದರಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು
ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದರು. ನೆಲದ ಕಾನೂನನ್ನು ಗೌರವಿಸಿ ಶಾಂತಿ ಯ ವಾತಾವರಣ ಕಾಪಾಡುವಂತೆ ಕರೆ ನೀಡಿದರು. ಹಬ್ಬದ ದಿನ ಯಾವುದೇ ಅಹಿತಕರ ಘಟನೆ ನಡೆದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು. ಹಾಗೇ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.
ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಮತ್ತು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್ ಇಬ್ರಾಹೀಂ ಸಅದಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಕುದ್ರೋಳಿ ಸಲಫಿ ಮಸೀದಿಯ ಮೈದಾನದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಮಂಗಳೂರು ಬಾವುಟಗುಡ್ಡದ ಈದ್ಗಾ ಮಸೀದಿಗೆ ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ ಸೌಹಾರ್ದ ಭೇಟಿ ನೀಡಿದರು. ಈದ್ಗಾ ಮಸೀದಿ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ ಈದ್ ಸಂದೇಶ ನೀಡಿದರು. ಮಾಜಿ ಮೇಯರ್ ಕೆ. ಅಶ್ರಫ್, ಈದ್ಗಾ ಮಸ್ಜಿದ್ ಕೋಶಾಧಿಕಾರಿ ಸೈಯದ್ ಬಾಷಾ ತಂಙಳ್, ಅದ್ದು ಹಾಜಿ, ಸಮದ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.