ಎಂಟಿಬಿ ನಾಗರಾಜ್ ಈ ಬಾರಿಯ ಚುನಾವಣೆಗೆ ಕಣಕ್ಕಿಳಿದಿರುವ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ; 2ನೇ ಸ್ಥಾನದಲ್ಲಿದ್ದಾರೆ ಡಿಕೆಶಿ
ಬೆಂಗಳೂರು: ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಅವರು 1,609 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಮುಂದುವರಿದಿದ್ದರೆ, ಎರಡನೇ ಶ್ರೀಮಂತ ಅಭ್ಯರ್ಥಿಯಾಗಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಥಾನ ಪಡೆದಿದ್ದಾರೆ.
ಎಂಟಿಬಿ ನಾಗರಾಜ್ ಕಳೆದ 3 ವರ್ಷಗಳಲ್ಲಿ ಅವರ ಆಸ್ತಿ 400 ಕೋಟಿ ರೂ. ಏರಿಕೆಯಾಗಿದೆ. 2019ರ ಉಪಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಎಂಟಿಬಿ ನಾಗರಾಜ್ 1,200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಬಹುಶಃ ನಾಗರಾಜ್ ದೇಶದ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 1,400 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಹಾಗು ರಿಯಲ್ ಎಸ್ಟೇಟ್ ಮತ್ತು ಗ್ರಾನೈಟ್ ವ್ಯವಹಾರಗಳನ್ನು ನಡೆಸುತ್ತಿದ್ದಾರೆ.
ಈ ಬಾರಿ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿದಿರುವ ಕಂದಾಯ ಸಚಿವ ಆರ್. ಅಶೋಕ ಅವರು 60 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಸಚಿವ ಮುನಿರತ್ನ ಅವರ ಆಸ್ತಿ 293 ಕೋಟಿ ರೂ., ಜೆಡಿಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸ್ತಿ ಮೌಲ್ಯ 181 ಕೋಟಿ ರೂ., ಅವರ ಪುತ್ರ ನಿಖಿಲ್ ಕುಮಾರಸ್ವಾಮಿ 76 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.