
ಉಡುಪಿಯ ಜಿ.ಶಂಕರ್ ಮನೆ ಹಾಗೂ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ; ದಾಖಲೆಗಳ ಪರಿಶೀಲನೆ
Thursday, April 20, 2023
ಉಡುಪಿ: ಇಲ್ಲಿನ ಮೊಗವೀರ ಸಮುದಾಯದ ಮುಖಂಡ, ಖ್ಯಾತ ಉದ್ಯಮಿ ಜಿ.ಶಂಕರ್ ಅವರ ಮನೆ ಹಾಗೂ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳ ತಂಡ ಗುರುವಾರ ಬೆಳಗಿನ ಜಾವ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಆದಾಯ ತೆರಿಗೆ ಇಲಾಖಾ ಅಧಿಕಾರಿಗಳು ದಾಳಿ ನಡೆದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಗುರುವಾರ ಬೆಳಗಿನ ಜಾವ 6 ಗಂಟೆ ಸುಮಾರಿಗೆ ಬೆಂಗಳೂರು ನೋಂದಣಿಯ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳ ತಂಡ, ಏಕಕಾಲದಲ್ಲಿ ಜಿ.ಶಂಕರ್ ಮನೆ ಹಾಗೂ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಈ ಪರಿಶೀಲನಾ ಕಾರ್ಯವು ಪೂರ್ವಾಹ್ನ 11 ಗಂಟೆಯವರೆಗೆ ನಡೆದಿದೆ ಎಂದು ಹೇಳಲಾಗಿದೆ.
ಐಟಿ ಅಧಿಕಾರಿಗಳ ತಂಡವು ಸಂಸ್ಥೆಯ ಲೆಕ್ಕ ಪತ್ರ ಹಾಗು ನಗದು ವಹಿವಾಟಿನ ವಿವರ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.