ಪ್ರವೀಣ್‌ ನೆಟ್ಟಾರು ಪತ್ನಿಗೆ ಮಾನವೀಯತೆ ಆಧಾರದಲ್ಲಿ ಮರು ನೇಮಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರವೀಣ್‌ ನೆಟ್ಟಾರು ಪತ್ನಿಗೆ ಮಾನವೀಯತೆ ಆಧಾರದಲ್ಲಿ ಮರು ನೇಮಕ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಪ್ರವೀಣ್‌ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರ ಕೆಲಸದ ವಿಚಾರವಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ಮರು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರವೀಣ್‌ ನೆಟ್ಟಾರು ಪತ್ನಿಯ ಗುತ್ತಿಗೆ ಕೆಲಸವು ಕೈತಪ್ಪಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಕಾಂಗ್ರೆಸ್‌ ಪಕ್ಷಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳ ಸಾಕಷ್ಟು ಪೋಸ್ಟ್‌ಗಳು ವೈರಲ್‌ ಆಗಿದ್ದವು.

ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಮಾನವೀಯ ದೃಷ್ಠಿಯಿಂದ 2022 ರ ಸೆ.22 ರಂದು ಗುತ್ತಿಗೆ ಆಧಾರದಲ್ಲಿ ಗ್ರೂಪ್ ಸಿ ಹುದ್ದೆಗೆ ನೂತನ ಕುಮಾರಿಯನ್ನು ನೇಮಕ ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಕಛೇರಿಯ ಪ್ರಾಕೃತಿಕ ವಿಕೋಪ ವಿಭಾಗದದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇದೀಗ ಹೊಸ ಸರ್ಕಾರವು ಎಲ್ಲಾ ಇಲಾಖೆಗಳಲ್ಲಿಯೂ ಗುತ್ತಿಗೆ ನೇಮಕಾತಿ ಮುಕ್ತಾಯಗೊಳಿಸಿದ ಹಿನ್ನೆಲೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಸದ್ಯ ಮರು ನೇಮಕಕ್ಕೆ ಸರ್ಕಾರ ನಿರ್ಧರಿಸಿರುವುದು ಹಲವರ ಪ್ರಶಂಸೆಗೆ ಕಾರಣವಾಗಿದೆ. ಈ ಕುರಿತು ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರವೀಣ್‌ ನೆಟ್ಟಾರು ಕುಟುಂಬದ ಬಗ್ಗೆ ಕಾಳಜಿ ಇದ್ದ ಬಿಜೆಪಿ ತಾತ್ಕಾಲಿಕ ಗುತ್ತಿಗೆ ಕೆಲಸ ನೀಡಿದ್ದೇಕೆ ಎಂದು ಪ್ರಶ್ನಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ) ಈಗ ನೆಟ್ಟಾರು ಕುಟುಂಬಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿಯೇ ಶಾಶ್ವತ ಕೆಲಸ ಕೊಟ್ಟು ಭದ್ದತೆಯನ್ನು ಪ್ರದರ್ಶಿಸಲಿ ಎಂದು ತಿರುಗೇಟು ನೀಡಿದೆ.

ಶನಿವಾರ ಸಂಜೆ ಟ್ವೀಟ್‌ ಮಾಡಿರುವ ಕೆಪಿಸಿಸಿ, ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತ, ಬಿಜೆಪಿಗೆ ನಿಜಕ್ಕೂ ಆತನ ಕುಟುಂಬದ ಮೇಲೆ ಕಾಳಜಿ ಇದ್ದಿದ್ದೇ ಆದರೆ ತಾತ್ಕಾಲಿಕ ಕೆಲಸ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಕರ್ನಾಟಕ ರಾಜ್ಯ ಬಿಜೆಪಿ ಕಚೇರಿಯಲ್ಲೆ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ. ಬಿಜೆಪಿ ತನ್ನ ಭದ್ದತೆಯನ್ನು ಪ್ರದರ್ಶಿಸಲಿ ಎಂದು ಸವಾಲು ಹಾಕಿದೆ.

Ads on article

Advertise in articles 1

advertising articles 2

Advertise under the article