ಗೋಮಾಂಸ ರಫ್ತಿನಲ್ಲಿ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ ಭಾರತ; ವಾರ್ಷಿಕ ₹40 ಸಾವಿರ ಕೋಟಿ ವಹಿವಾಟು:  ಅಗ್ನಿ ಶ್ರೀಧರ್

ಗೋಮಾಂಸ ರಫ್ತಿನಲ್ಲಿ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ ಭಾರತ; ವಾರ್ಷಿಕ ₹40 ಸಾವಿರ ಕೋಟಿ ವಹಿವಾಟು: ಅಗ್ನಿ ಶ್ರೀಧರ್

ಬೆಂಗಳೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ವಿರೋಧಿ ಕಾನೂನು ಅವೈಜ್ಞಾನಿಕ ಮತ್ತು ವಿವೇಚನಾರಹಿತವಾಗಿದೆ. ಇದು ಹಸುಗಳ ಅಥವಾ ರೈತರ ಹಿತಾಸಕ್ತಿಯಲ್ಲ ಎಂದು ರಾಷ್ಟ್ರೀಯ ದ್ರಾವಿಡ ಸಂಘದ (ಆರ್‌ಡಿಎಸ್‌) ಅಧ್ಯಕ್ಷ, ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರ್, ಬಿಜೆಪಿಯನ್ನು ಬೆಂಬಲಿಸುವ ಸಂಘಟನೆಗಳು ಗೋವನ್ನು ತಾಯಿಯೊಂದಿಗೆ ಸಮೀಕರಿಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಗೋವಿನ ಮಾಂಸದ ರಫ್ತು ವಿಚಾರದಲ್ಲಿ ಭಾರತ ಎಲ್ಲಾ ದೇಶಗಳನ್ನು ಹಿಂದಿಕ್ಕಿದೆ. ‘ಜೈನ ಸಮುದಾಯದ ಕೆಲವರು ಗೋವಿನ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ವಾರ್ಷಿಕ ₹40 ಸಾವಿರ ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಗೋವಿನ ಮಾಂಸ ರಫ್ತು ಮಾಡುವ ಉದ್ಯಮದಲ್ಲಿ ಈ ಹಿಂದೆ ಮುಸ್ಲಿಂ ಸಮುದಾಯವು ದೊಡ್ಡ ಪಾಲನ್ನು ಹೊಂದಿತ್ತು. ಮುಸ್ಲಿಮರನ್ನು ಈ ಉದ್ಯಮದಿಂದ ಹೊರಗಿಡಲು ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ. ಈ ಹುನ್ನಾರದ ಹಿಂದೆ ಜೈನ ಸಮುದಾಯವಿದೆ’ ಎಂದು ದೂರಿದರು.

ಶ್ರೀಮಂತ ಮುಸ್ಲಿಮರು ಹಸುವಿನ ಮಾಂಸವನ್ನು ತಿನ್ನುವುದಿಲ್ಲ. ಆದರೆ, ಗೋಹತ್ಯೆಯ ವಿಷಯ ಮುನ್ನಲೆಗೆ ಬಂದಾಗಲೆಲ್ಲ ಇದನ್ನು ಮುಸ್ಲಿಮರ ಆಹಾರವೆಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ದಲಿತರು, ಕ್ರಿಶ್ಚಿಯನ್ನರು ಹಸುವಿನ ಮಾಂಸವನ್ನು ಹೆಚ್ಚು ಸೇವಿಸುತ್ತಾರೆ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಸುವ ಕೆಲಸ ನಡೆಯುತ್ತಿದೆ’ ಎಂದರು.

ಕುಣಿಗಲ್‌ನ ಅರೇಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಕಾನೂನಿನಿಂದಾಗಿ ಕರ್ನಾಟಕದಲ್ಲಿ ಕೃಷಿ ಆರ್ಥಿಕತೆ ಬದಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಯಗೊಂಡ ಹಸುವನ್ನು ನೋಡಿಕೊಳ್ಳಲು ತಗಲುವ ವೆಚ್ಚದಲ್ಲಿ ಎರಡರಿಂದ ಮೂರು ಕುಟುಂಬದ ಸದಸ್ಯರ ನಿರ್ವಹಣೆ ಮಾಡಬಹುದು ಎಂದಿದ್ದಾರೆ.

ಹಸುಗಳನ್ನು ಸಾಕದೆ ಅದರಲ್ಲಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಪ್ರಕ್ರಿಯೆಯಲ್ಲಿ ಆಗುವ ವೆಚ್ಚ ಮತ್ತು ಕಷ್ಟವನ್ನು ತಿಳಿಯಲು ಗೋ ರಕ್ಷಕರು ಕನಿಷ್ಠ ಒಂದು ತಿಂಗಳ ಕಾಲ ಹಾಲು ಕರೆಯದ ಮತ್ತು ಗಾಯಗೊಂಡ ಪ್ರಾಣಿಗಳನ್ನು ನೋಡಿಕೊಳ್ಳಬೇಕು ಎಂದು ಸವಾಲು ಹಾಕಿದರು. ಕೂಡಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು, ವಿಫಲವಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯ ಮೂಲಕ ರಾಜ್ಯದ ಕೃಷಿ ಕುಟುಂಬಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು, ರೈತರ ಜೀವನ ಮೂರಾಬಟ್ಟೆಯಾಗಿದೆ. ವಯಸ್ಸಾದ ಹಸುಗಳನ್ನು ನೋಡಿಕೊಳ್ಳುವುದು ರೈತರಿಗೆ ಕಷ್ಟವಾಗುತ್ತಿದೆ. ಆದ್ದರಿಂದ, ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘದ ಚಾಮರಸ ಮಾಲೀಪಾಟೀಲ, ಮನೋವಿಜ್ಞಾನಿ ಡಾ. ಅ. ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Ads on article

Advertise in articles 1

advertising articles 2

Advertise under the article