ಶಾರ್ಟ್ ಸರ್ಕ್ಯೂಟ್; ಪತಿ ಪತ್ನಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಜೀವದಹನ
Sunday, March 31, 2024
ದ್ವಾರಕಾ: ಗುಜರಾತ್‌ನ ದ್ವಾರಕಾದಲ್ಲಿ ಅಗ್ನಿ ದುರಂತ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಕಿಯಿಂದಾಗಿ ಏಳು ತಿಂಗಳ ಹೆಣ್ಣು ಮಗು, ಪತಿ-ಪತ್ನಿ ಹಾಗೂ ಅಜ್ಜಿ ಸೇರಿ ನಾಲ್ವರು ಸಜೀವದಹನವಾಗಿದ್ದಾರೆ. ಬೆಳಗಿನ ಜಾವ 3ರಿಂದ 4ಗಂಟೆಯ ನಡುವೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದರಿಂದ ಮನೆಯಲ್ಲಿದ್ದವರು ಉಸಿರುಗಟ್ಟಿ ಬೆಂಕಿಯಲ್ಲೇ ಸಜೀವದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಪವನ್ ಕಮಲೇಶ್ ಉಪಾಧ್ಯಾಯ (30 ವರ್ಷ), ಭಾವನ ಉಪಾಧ್ಯಾಯ (27 ವರ್ಷ), ಧ್ಯಾನಾ ಉಪಾಧ್ಯಾಯ (7 ತಿಂಗಳ ಬಾಲಕಿ) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.