CAA ಜಾರಿಯನ್ನು ವಿರೋಧಿಸಿದ ತಮಿಳು ನಟ ವಿಜಯ್; ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಡಿಎಂಕೆ ಸರ್ಕಾರ ಜನರಿಗೆ ಭರವಸೆ ನೀಡುವಂತೆ ಒತ್ತಾಯ
Tuesday, March 12, 2024
ಚೆನ್ನೈ: ಇತ್ತೀಚೆಗೆ ತಮ್ಮ ರಾಜಕೀಯ ಪಕ್ಷ 'ತಮಿಳಗ ವೆಟ್ರಿ ಕಳಗಂ' ಅನ್ನು ಪ್ರಾರಂಭಿಸಿದ ತಮಿಳು ನಟ ವಿಜಯ್ ಅವರು ಮಂಗಳವಾರ ಪೌರತ್ವ (ತಿದ್ದುಪಡಿ) ಕಾಯ್ದೆ(CAA)ಯನ್ನು 'ವಿಭಜಕ' ಎಂದು ಕರೆದಿದ್ದಾರೆ ಮತ್ತು ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೊಳಿಸುವುದಿಲ್ಲ ಎಂದು ಡಿಎಂಕೆ ಸರ್ಕಾರವು ಜನರಿಗೆ ಭರವಸೆ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಸಿಎಎ ಅನ್ನು ಜಾರಿಗೊಳಿಸಲು ಕೇಂದ್ರವು ನಿನ್ನೆ ಅಧಿಸೂಚನೆಯನ್ನು ಹೊರಡಿಸಿತ್ತು.
ಈ ಕುರಿತು ಪಕ್ಷದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ್ದು, 'ವಿಭಜಕ ರಾಜಕೀಯ' ಅನುಸರಿಸಿ ಜಾರಿಗೆ ತರುತ್ತಿರುವ CAAಯಂತಹ ಯಾವುದೇ ಕಾನೂನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ನಟ ವಿಜಯ್ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದೆ. ಏಕೆಂದರೆ 2026ರ ವಿಧಾನಸಭಾ ಚುನಾವಣೆಯು ಅವರ ಗುರಿಯಾಗಿದೆ ಎಂದು ಅವರು ಈ ಮೊದಲೇ ಘೋಷಿಸಿದ್ದರು.