ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಎಲ್ಲೆಡೆ ಮಾಸ್ ಮರ್ಡರ್ ಸಾಮಾನ್ಯವಾಗಿದೆ: ಬೊಮ್ಮಾಯಿ
Friday, April 19, 2024
ಹುಬ್ಬಳ್ಳಿ: 'ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಎಲ್ಲೆಡೆ ಮಾಸ್ ಮರ್ಡರ್ ಸಾಮಾನ್ಯವಾಗಿದೆ' ಎಂದು ಶಾಸಕ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಸರಕಾರದ ವಿರುದ್ಧ ಹೇಳಿದರು.
ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿ, ನೇಹಾ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯ ಸಹ ಬಿಹಾರ ಆಗಲಿದೆ' ಎಂದರು.
'ಕಾಲೇಜು ಆವರಣದಲ್ಲಿ ಇಂತಹ ಪ್ರಕರಣ ನಡೆಯುತ್ತದೆ ಎಂದು ನಾವ್ಯಾರೂ ಊಹಿಸಿರಲಿಲ್ಲ. ಇದು ಸಮಾಜದಲ್ಲಿ ಆಗುತ್ತಿರುವ ಕ್ಷೋಭೆಯನ್ನು ತೋರಿಸುತ್ತದೆ. ಇಂಥ ಘಟನೆಗಳಿಂದ ಸಮಾಜದಲ್ಲಿ ಸಾಮರಸ್ಯದ ಕೊರತೆಯಾಗುತ್ತದೆ' ಎಂದು ಹೇಳಿದರು.
'ರೌಡಿಗಳಿಗೆ, ಗೂಂಡಾಗಳಿಗೆ ಪೊಲೀಸರ ಹೆದರಿಕೆಯೇ ಇಲ್ಲದಂತಾಗಿದ್ದು, ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ನಾವು ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಎನ್ನುವ ಮನೋಭಾವ ಅವರಲ್ಲಿ ಬೆಳೆದಿದೆ' ಎಂದರು.