ಎಬಿಪಿ-ಸಿ ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಟ; ಮೋದಿ ಮತ್ತೊಮ್ಮೆ ಅಧಿಕಾರಕ್ಕೆ; ರಾಜ್ಯದಲ್ಲಿ ಯಾರಿಗೆ ಹೆಚ್ಚು ಸ್ಥಾನ ಸಿಗಲಿದೆ ನೋಡಿ...
ಬೆಂಗಳೂರು : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮೊದಲ ಹಂತದ ಮತದಾನಕ್ಕೆ 11 ದಿನ ಮಾತ್ರ ಬಾಕಿಯುಳಿದಿದೆ. ಬಿಜೆಪಿ - ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಶತಪ್ರಯತ್ನ ನಡೆಸುತ್ತಿದ್ದಾರೆ. ಇದರ ನಡುವೆ ಎಬಿಪಿ ಹಾಗೂ ಸಿ ವೋಟರ್ ಅಂತಿಮ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಕಾಂಗ್ರೆಸ್ ಆಡಳಿತಾರೂಢ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ನೀಡಿದೆ.
ಗ್ಯಾರಂಟಿಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಮತ್ತೆ ಒಂದಂಕಿ ಸಾಧನೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು, ಜೆಡಿಎಸ್ ಸ್ಪರ್ಧಿಸಿರುವುದೇ ಮೂರು ಕ್ಷೇತ್ರಗಳಲ್ಲಾಗಿರುವುದರಿಂದ ಬಿಜೆಪಿಗೆ ಉತ್ತಮ ಸಾಥ್ ನೀಡಲಿದೆ ಎಂದು ಎಬಿಪಿ - ಸಿ ವೋಟರ್ ಸಮೀಕ್ಷೆ ಭವಿಷ್ಯವನ್ನು ನುಡಿದಿದೆ. ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿದಿದ್ದರೂ ಕೂಡ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ಸಮೀಕ್ಷೆ ಅಂದಾಜಿಸಿದೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ - ಜೆಡಿಎಸ್ ಮೈತ್ರಿ 23 ಕ್ಷೇತ್ರಗಳನ್ನು ಹಾಗೂ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್‌ಡಿಎ ಮೈತ್ರಿ ಪೈಕಿ ಬಿಜೆಪಿ 21 ಹಾಗೂ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಇದು ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಕಾಣ್ತಿದ್ದ ಬಿಜೆಪಿ - ಜೆಡಿಎಸ್ ಮೈತ್ರಿಗೆ ಶಾಕ್ ನೀಡಿದೆ. ಅದರ ಜೊತೆ ಗ್ಯಾರಂಟಿಗಳನ್ನು ನೆಚ್ಚಿಕೊಂಡಿದ್ದ ಕಾಂಗ್ರೆಸ್‌ಗೂ ಸಮೀಕ್ಷೆ ಆಘಾತ ನೀಡಿದೆ.
ಕಳೆದ ಬಾರಿ ಬಿಜೆಪಿ 25 + 1 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಅದು 21 ಕ್ಕೆ ಇಳಿಯುವುದರಿಂದ ಐದು ಸ್ಥಾನಗಳನ್ನು ಕಳೆದುಕೊಂಡಂತೆ ಆಗಲಿದೆ. ಇನ್ನು, ಜೆಡಿಎಸ್ ಕಳೆದ ಬಾರಿ ಒಂದು ಕ್ಷೇತ್ರದಲ್ಲಿ ಗೆದ್ದಿತ್ತು, ಈ ಬಾರಿ ಅದು ಎರಡು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದರೆ, ಕಾಂಗ್ರೆಸ್ ಕೂಡ ತನ್ನ ಸ್ಥಾನಗಳನ್ನು ಒಂದರಿಂದ ಐದಕ್ಕೆ ಏರಿಸಿಕೊಳ್ಳಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ, ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಸಾಕಾಗಲ್ಲ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ.
400ರ ಗಡಿಗೆ ಎನ್‌ಡಿಎ, ಬಿಜೆಪಿಗೆ ಮತ್ತಷ್ಟು ಹೆಚ್ಚು ಸ್ಥಾನ!
ಈ ಬಾರಿ ಎನ್‌ಡಿಎ 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಎಬಿಪಿ - ಸಿ ವೋಟರ್ ಸಮೀಕ್ಷೆ ಎನ್‌ಡಿಎಗೆ 373 ಸ್ಥಾನಗಳನ್ನು ನೀಡಿದ್ದು, ಬಿಜೆಪಿಯೇ ಸ್ವಂತವಾಗಿ 323 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದ್ದು, ಕಳೆದ ಬಾರಿಗಿಂತ 20 ಕ್ಷೇತ್ರಗಳನ್ನು ಹೆಚ್ಚು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇದರೊಂದಿಗೆ ಮೂರನೇ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದ ಗದ್ದುಗೆ ಏರಲಿದೆ ಎಂದು ಸಮೀಕ್ಷೆ ಫಲಿತಾಂಶದಲ್ಲಿ ಕಂಡುಬಂದಿದೆ. ಇನ್ನು, ಕಾಂಗ್ರೆಸ್ ಸ್ವಂತವಾಗಿ 65 ಕ್ಷೇತ್ರಗಳಲ್ಲಿ ಗೆದ್ದರೆ, ಇಂಡಿಯಾ ಒಕ್ಕೂಟ 155 ಸೀಟುಗಳಲ್ಲಿ ಗೆಲ್ಲಬಹುದು ಎಂದು ಎಬಿಪಿ - ಸಿ ವೋಟರ್ ಸಮೀಕ್ಷೆ ಅಂದಾಜಿಸಿದೆ.
ಬಿಜೆಪಿ - ಜೆಡಿಎಸ್ ಮೈತ್ರಿ VS ಕಾಂಗ್ರೆಸ್!
ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿವೆ. 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ತನ್ನ ಹಾಲಿ ಸಂಸದರು ಇರುವ ಎರಡು ಕ್ಷೇತ್ರಗಳನ್ನು (ಪಕ್ಷೇತರ ಸಂಸದರು ಇರುವ ಮಂಡ್ಯ ಸೇರಿ) ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಇತ್ತ ಕಾಂಗ್ರೆಸ್ ಏಕಾಂಗಿಯಾಗಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಮೈತ್ರಿಯೂ ಬದಲಾಗಿದೆ.
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ!
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26 ಮತ್ತು ಮೇ 7 ರಂದು ಕರ್ನಾಟಕದಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಜೂನ್ 4 ರಂದು ಫಲಿತಾಂಶ ಬರಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರ, ಎರಡನೇ ಹಂತದಲ್ಲಿ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇನ್ನು, ದೇಶಾದ್ಯಂತ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಬರಲಿದೆ.