ಪಡುಬಿದ್ರೆಯಲ್ಲಿ ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿ ಸ್ಕೂಲ್ ಶುಭಾರಂಭ; ಲೋಕಾರ್ಪಣೆ ಮಾಡಿದ ಖ್ಯಾತ ಸಿನೆಮಾ ನಟ ಸುಮನ್ ತಲ್ವಾರ್
ಪಡುಬಿದ್ರೆ: ಮೌಲ್ಯಾಧಾರಿತ, ಕ್ರಿಯಾಶೀಲ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಡುಬಿದ್ರೆಯ ಸರಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿ ಸ್ಕೂಲ್(ಆಂಗ್ಲ ಮಾಧ್ಯಮ ಶಾಲೆ) ಗುರುವಾರ ಲೋಕಾರ್ಪಣೆಗೊಂಡಿತು. ಇದೇ ವೇಳೆ 'ಸ್ಕೂಲ್ ಚಲೋ ಈವೆಂಟ್' ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಲ್ ಫಲಾಹ್ ಅಕಾಡಮಿ ಸ್ಕೂಲ್'ನ್ನು ಖ್ಯಾತ ಸಿನೆಮಾ ನಟ ಸುಮನ್ ತಲ್ವಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಭದ್ರ ಬುನಾದಿ ಹಾಕಿ ಕೊಡುವುದೇ ಶಿಕ್ಷಣ. ಆ ಶಿಕ್ಷಣದಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಂದು ನಾವು ಮುಖ್ಯವಾಗಿ ಆಂಗ್ಲ ಮಾಧ್ಯಮವನ್ನು ಕಲಿಯಲೇಬೇಕಾದ ವಾತಾವರಣವಿದೆ. ಅದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೋಗಲು ಸಹಕಾರಿ ಆಗುತ್ತೆ. ಈ ನಿಟ್ಟಿನಲ್ಲಿ ಅಲ್ ಫಲಾಹ್ ಶಾಲೆ ನಮ್ಮ ಮಕ್ಕಳಿಗೆ ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡುವಲ್ಲಿ ಸಹಕಾರಿ ಆಗಲಿದೆ ಎಂದರು.
ಅಲ್ ಫಲಾಹ್ ಶಾಲೆಯ ವಿಶೇಷತೆಗಳನ್ನು ನೋಡಿದೆ. ಇಂದಿನ ಜಗತ್ತಿಗೆ ತೆರೆದುಕೊಂಡಿರುವಂಥ ಹೊಸ ಮಾದರಿಯ ವಿಷಯಗಳನ್ನು ಇಟ್ಟುಕೊಂಡು ಶಾಲೆಯನ್ನು ನಿರ್ಮಿಸಲಾಗಿದೆ. ಭೋದನೆಯ ಕ್ರಮ, ಇಲ್ಲಿನ ವಾತಾವರಣ ಎಲ್ಲವೂ ನಮ್ಮ ಮಕ್ಕಳಿಗೆ ಭವಿಷ್ಯ ನಿರ್ಮಿಸಲು ಪೂರಕವಾಗಿದೆ. ನಮ್ಮ ಸುತ್ತಮುತ್ತಲಿನ ಎಲ್ಲ ಮಕ್ಕಳು ಈ ಶಾಲೆಯ ಸದುಪಯೋಗ ಪಡೆಡುಕೊಳ್ಳುವಂತೆ ಸುಮನ್ ತಲ್ವಾರ್ ಮನವಿ ಮಾಡಿದರು.
ನಮ್ಮ ಊರು ಬಿಟ್ಟು ಪರದೇಶಕ್ಕೆ ಹೋದವರು ಹಿಂದಿರುಗಿ ನೋಡದ ಸಮಯದಲ್ಲಿ ನಝೀರ್ ಹುಸೈನ್ ಅವರು ಸೌದಿಯಲ್ಲಿ ವ್ಯವಹಾರ ಮಾಡಿಕೊಂಡು ತನ್ನ ಊರಿನಲ್ಲಿ ಒಂದೊಳ್ಳೆಯ ಶಾಲಾ ಕಟ್ಟಿರುವುದು ಅವರ ಬದ್ಧತೆಯನ್ನು ಊರಿನ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದು ನೂತನ ಶಾಲೆಗೆ ಶುಭ ಹಾರೈಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಆಧ್ಯಾತ್ಮಿಕ ಶಿಕ್ಷಣದ ಜೊತೆಯಲ್ಲಿ ಲೌಕಿಕ ಶಿಕ್ಷಣದ ಅವಶ್ಯಕತೆ ಇದೆ.ಸಾಚಾರ್ ಕಮಿಟಿ ವರದಿಯಲ್ಲಿ ಮುಸ್ಲಿಮರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿತ್ತು. ಈ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಎ.ಮೊಹಿದಿನ್, ಯು.ಟಿ.ಫರೀದ್ ಅವರ ಪ್ರೇರಣೆಯಿಂದಾಗಿ ಎಲ್ಕೆಜಿಯಿಂದ ಹಿಡಿದು ತಾಂತ್ರಿಕ, ವೈದ್ಯಕೀಯ ಶಿಕ್ಷಣವನ್ನು ಕಟ್ಟಿಬೆಳೆಸಿದ ಕೀರ್ತಿ ಮುಸ್ಲಿಂ ಸಮುದಾಯದ್ದು. ಶಿಕ್ಷಣ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯ ಕೊಟ್ಟ ಕೊಡುಗೆ ಅಪಾರ ಎಂದರು.
ತಾನು ಹುಟ್ಟಿದ ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ದೆಸೆಯಲ್ಲಿ AL-FALAH Smart-Ed Academyಯನ್ನು ನಝೀರ್ ಹುಸೈನ್ ಅವರು ಕಟ್ಟಿದ್ದಾರೆ. ಇದು ಇನ್ನಷ್ಟು ಉತ್ತುಂಗಕ್ಕೇರಲಿ ಎಂಬ ಆಶಯ ನಮ್ಮದು ಎಂದು ಶುಭ ಹಾರೈಸಿದರು.
ಶಾಲಾ ಕೊಠಡಿಯನ್ನು ಉದ್ಘಾಟಿಸಿದ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತ, ಮೋಟಿವೇಟರ್ ರಫೀಕ್ ಮಾಸ್ಟರ್ ಮಾತನಾಡಿ, ಇಂದು ಜ್ಞಾನ ಎಂಬುವುದು ಇಡೀ ಜಗತ್ತನ್ನೇ ಬದಲಾಯಿಸಬಲ್ಲ ಶಕ್ತಿಯುಳ್ಳಂಥ ಅಸ್ತ್ರ. ಅದನ್ನು ನಮ್ಮ ಮಕ್ಕಳಿಗೆ ನೀಡುವ ಮೂಲಕ ಮಕ್ಕಳನ್ನು ಉತ್ತುಂಗದ ಶಿಖರಕ್ಕೇರಿಸಬೇಕಾಗಿರುವುದು ನಮ್ಮ ಪೋಷಕರು. ಇಂದು ಜಗತ್ತು ಸ್ಮಾರ್ಟ್ ಆಗುತ್ತಿದೆ. ನಮ್ಮ ಪಡುಬಿದ್ರೆಯ ಮಕ್ಕಳು ಕೂಡ ಜಗತ್ತನ್ನು ಆಳಬೇಕು, ಈ ನಿಟ್ಟಿನಲ್ಲಿ ನಝೀರ್ ಹುಸೈನ್ ಅವರು ನಿರ್ಮಿಸಿರುವ ಈ ಶಾಲೆಯಲ್ಲಿ ಜಗತ್ತಿನ ಅತ್ಯುನ್ನತವಾದ ವಿಷಯಗಳ ಬಗ್ಗೆ ತರಬೇತಿ ಮಕ್ಕಳಿಗೆ ನೀಡಲಾಗುತ್ತೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಸಾಧನೆ, ಸಾಮಾಜಿಕ-ಶೈಕ್ಷಣಿಕ ಕಳಕಳಿಯನ್ನು ಗುರುತಿಸಿ ಶಾಲಾ ಸಂಸ್ಥಾಪಕ, ಅಧ್ಯಕ್ಷ ನಝೀರ್ ಹುಸೈನ್, ರಫೀಕ್ ಮಾಸ್ಟರ್ ಹಾಗು ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ASG ಹರೀಶ್ ಕುಮಾರ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಮಾಜಿ ಶಾಸಕ ಲಾಲಾಜಿ ಅರ್.ಮೆಂಡನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಅಲ್ ಫಲಾಹ್ (AL-FALAH Smart-Ed Academy) ಅಕಾಡಮಿಯ ಆಡಳಿತ ನಿರ್ದೇಶಕ ಮೊಹಮ್ಮದ್ ಹುಸೈನ್ ಮೊಹಿದಿನ್ ಹಾಜಿ, ಶಾಲಾ ಪ್ರಾಂಶುಪಾಲ ಸಯ್ಯದ್ ಸಫೀವುಲ್ಲಾ, ಶೇಖ್ ಬುಡಾನ್ ಸಾಬ್, ಕಾಂಗ್ರೆಸ್ ಮುಖಂಡ ನವೀನ್ ಚಂದ್ರ ಶೆಟ್ಟಿ, ಪಡುಬಿದ್ರೆ ಗ್ರಾಮ ಪಂಚಾಯತ್ ಶಶಿಕಲಾ, ಲಿಯಾಖತ್ ಅಲಿ ಮುಂಬೈ, ಅಬ್ದುಲ್ ಸಲಾಂ ಸೌದಿ ಅರೇಬಿಯಾ, ಶಿವ ಕುಮಾರ್, ಸಂತೋಷ್ ಶೆಟ್ಟಿ, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ಎಸ್ಡಿಪಿಐ ಮುಖಂಡ ಹನೀಫ್ ಮೂಳೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮೊಹಮ್ಮದ್ ಅಶ್ರಫ್ ಪುರ್ಖಾನ್ ಕಿರಾತ್ ಪಠಿಸಿದರು. ಶಿಕ್ಷಕಿ ಶಬ್ರಿನ್ ಸ್ಮಾರ್ಟ್ ಎಜುಕೇಶನ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಪ್ರಾಂಶುಪಾಲೆ ರುಮಾನ ನವಾಜ್ ಸ್ವಾಗತಿಸಿದರು. ಅಂತಾರಾಷ್ಟ್ರೀಯ ಕಾರ್ಯಕ್ರಮ ನಿರೂಪಕ ಸಾಹಿಲ್ ಝಹೀರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.