ರಘುಪತಿ ಭಟ್'ಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ; ರಘುಪತಿ ಭಟ್ ಉಚ್ಚಾಟನೆಗೆ ರಾಜ್ಯ ಸಮಿತಿಗೆ ಶಿಫಾರಸು ಮಾಡಿದ್ದೇವೆ; ಭಟ್ರೊಂದಿಗೆ ಹೋಗಿರುವ ಪದಾಧಿಕಾರಿಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ; ಉಡುಪಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಎಚ್ಚರಿಕೆ

ರಘುಪತಿ ಭಟ್'ಗೆ ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ; ರಘುಪತಿ ಭಟ್ ಉಚ್ಚಾಟನೆಗೆ ರಾಜ್ಯ ಸಮಿತಿಗೆ ಶಿಫಾರಸು ಮಾಡಿದ್ದೇವೆ; ಭಟ್ರೊಂದಿಗೆ ಹೋಗಿರುವ ಪದಾಧಿಕಾರಿಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ; ಉಡುಪಿ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಎಚ್ಚರಿಕೆ

ಉಡುಪಿ: ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಮಾಜಿ ಶಾಸಕರಾದ ರಘುಪತಿ ಭಟ್ ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುವಂತೆ ಜಿಲ್ಲಾ ಬಿಜೆಪಿಯು ರಾಜ್ಯ ಸಮಿತಿಗೆ ಶಿಫಾರಸು ಮಾಡಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಹೇಳಿದ್ದಾರೆ. 

ಉಡುಪಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಂತೆ ಬಿಂಬಿಸಿಕೊಳ್ಳುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಮತದಾರರಲ್ಲೂ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಹಾಗಾಗಿ ಅವರನ್ನು ಉಚ್ಛಾಟಿಸುವಂತೆ ಶಿಫಾರಸು ಮಾಡಲಾಗಿದೆ ಎಂದರು.

ರಘುಪತಿ ಭಟ್ ಗೆ ಅನ್ಯಾಯ ಆಗಿಲ್ಲ:

ರಘುಪತಿ ಭಟ್ ಅವರಿಗೆ ಅನ್ಯಾಯ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಅವರಿಗೆ ಪಕ್ಷದ ಕಡೆಯಿಂದ ಯಾವುದೇ ಅನ್ಯಾಯ ಆಗಿಲ್ಲ. ಯುವ ಮೋರ್ಚಾದಿಂದ ಹಿಡಿದು ಎಲ್ಲ ಹುದ್ದೆಗಳನ್ನು ಪಕ್ಷ ನೀಡಿದೆ. ಮೂರು ಬಾರಿ ಎಂಎಲ್ ಎ ಆಗಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಪ್ರಭಾರಿಯನ್ನಾಗಿ ನೇಮಿಸಲಾಗಿತ್ತು. ಹೀಗಿರುವಾಗ ಅವರಿಗೆ ಅನ್ಯಾಯ ಆಗಿದೆ ಎಂಬುವುದು ಶುದ್ಧ ಸುಳ್ಳು. ಮತದಾರರನ್ನು ಹಾದಿತಪ್ಪಿಸುವ ಕೆಲಸ ಅವರಿಂದ ಆಗುತ್ತಿದೆ. ಪಕ್ಷದಲ್ಲಿ ಅನ್ಯಾಯ ಆಗಿದೆ ಎಂಬುವುದಕ್ಕೆ ಬಂಡಾಯ ಸ್ಪರ್ಧೆ ಉತ್ತರವಲ್ಲ ಎಂದು ಟಾಂಗ್ ನೀಡಿದ್ರು.

ರಘುಪತಿ ಭಟ್ ಅವರೊಂದಿಗೆ ಪಕ್ಷದ ಯಾವುದೆಲ್ಲ ಪದಾಧಿಕಾರಿಗಳು ಹೋಗಿದ್ದಾರೆ ಎನ್ನುವುದು ಪಕ್ಷದ ಗಮನದಲ್ಲಿದೆ. ಯಾರೆಲ್ಲರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆಯೋ ಅವರೆಲ್ಲರ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅದು ಪಕ್ಷದ ಆಂತರಿಕ ವಿಚಾರ ಎಂದರು. 

ರಘುಪತಿ ಭಟ್ ಚುನಾವಣೆಯಲ್ಲಿ ಗೆದ್ದರೂ ಸೋತರೂ ಪಕ್ಷದಲ್ಲೇ ಇರುತ್ತೇನೆ ಎಂದು‌ ಹೇಳಿದ್ದಾರೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ಅದು ಅವರ ಹೇಳಿಕೆ ಅಷ್ಟೇ. ಆ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ನಾನು ಶಿಫಾರಸು ಮಾಡಿದ್ದು, ನಾಳೆ ಅವರು ಪಕ್ಷಕ್ಕೆ ಬರಲಿ ಅಂತಾ ಅಲ್ಲ. ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಶಿಫಾರಸು ಮಾಡುದ್ದೇವೆ ಎಂದರು.

Ads on article

Advertise in articles 1

advertising articles 2

Advertise under the article