ಅವರು ಇನ್ನಿಲ್ಲವಾದರು, ಈ ದುಷ್ಟಜಾಲವೂ ಇನ್ನಿಲ್ಲವಾಗಲಿ
- ಡಿ.ಐ. ಅಬೂಬಕರ್ ಕೈರಂಗಳ
ಮಮ್ತಾಝ್ ಅಲಿ ಎಂಬ ಮಹಾನುಭಾವ ಇನ್ನಿಲ್ಲವಾದರು. ದಶಲಕ್ಷ ಸಂಖ್ಯೆಯ ಅಭಿಮಾನಿಗಳ ಹೃದಯಮಿಡಿತ ಅವರದ್ದು ಏನೋ ಒಂದು ನಾಟಕೀಯ ವಿದ್ಯಮಾನ, ನಾಳೆ ಬಂದೇ ಬರ್ತಾರೆ ಎಂದಾಗಿತ್ತು. ಹಾಗೇ ಆಗಲಿ ಎಂದಾಗಿತ್ತು ಎಲ್ಲರ ಮನದಾಳದ ಹಾರೈಕೆ. ಮಮ್ತಾಝ್ ಅಲಿಯವರು ಹೋಗಲಿ ಎಂದು ಬಯಸುವ ಒಂದೇ ಒಂದು ಜೀವ ಈ ನಾಡಲ್ಲಿ ಇಲ್ಲ. ಅವರ ವ್ಯಕ್ತಿತ್ವ ಅಂತಹದ್ದಾಗಿತ್ತು. ಎಲ್ಲರಿಗೂ ಅವರು ಬೇಕಾದವರಾಗಿದ್ದರು.
ಸುದ್ಧಿ ತಿಳಿದ ಕೂಡಲೇ ನಮ್ಮ ಆ್ಯಕ್ಷಿಬ್ಲೂ ಮಿನರಲ್ ವಾಟರ್ ಕಂಪೆನಿಯ ಮಾಲಿಕ ಮನ್ಸೂರ್ ಹಾಜಿ ಅಹ್ಮದ್ ಆಝಾದ್ ರವರಿಗೆ ಪೋನಾಯಿಸಿದ್ದೆ. ಆದರೆ ಅವರು ಮಾತನಾಡುವ ಸ್ಥಿತಿಯಲ್ಲಿದ್ದಿರಲಿಲ್ಲ. ಮುಮ್ತಾಜ್ ಅಲಿ ಮತ್ತು ಮನ್ಸೂರ್ ಹಾಜಿ ಗಳಸ್ಯ ಕಂಠಸ್ಯ ಮಿತ್ರರು. ಬಹುಕಾಲದಿಂದ ನಾನದನ್ನು ಕಾಣುತ್ತಾ ಬಂದಿದ್ದೇನೆ. ಪ್ಲಾಸ್ಟಿಕ್ ಲ್ಯಾಂಡ್ ಅಸ್ಗರಲಿ, ಜಿಲ್ಲಾ ವಕಫ್ ಬೋರ್ಡ್ ಅಧ್ಯಕ್ಷರಾದ ಲಕ್ಕಿಸ್ಟಾರ್ ನಾಸಿರ್ ಬಾಯ್ ಮುಂತಾದ ಸಮಾನ ಮನಸ್ಕರ ಒಂದು ಟೀಮಿನಲ್ಲಿ ಒಬ್ಬರಾಗಿದ್ದರು ಮರ್ಹೂಮ್ ಮಮ್ತಾಝ್ ಅಲಿಯವರು. ಎಸ್. ಎಮ್ . ರಶೀದ್ ಹಾಜಿಯವರು ಆ ಟೀಮಿನ ಹಿರಿಯರಾಗಿದ್ದರು. ಇವರೆಲ್ಲರೂ ಸದಾ ಧಾರ್ಮಿಕ, ಸಾಮಾಜಿಕ ತುಡಿತದವರೇ ಆಗಿದ್ದುದರಿಂದ ಅವರು ಒಟ್ಟುಗೂಡಿದರೆ ನಡೆಯುತ್ತಿದ್ದ ಮಾತುಕತೆಯೂ ಅದೇ ಆಗಿತ್ತು.
ನನ್ನ ಬಾಸ್ ಮನ್ಸೂರ್ ಹಾಜಿಯವರಲ್ಲಿ ಫೋನಲ್ಲಿ ಮಾತಾಡಲು ಸಾಧ್ಯವಿಲ್ಲವೆಂದರಿತಾಗ ಅವರ ಬಳಿಗೆ ಧಾವಿಸಿದ್ದೆ. ಹಾಜಿಯವರ ಕಳವಳ, ಚಡಪಡಿಕೆ, ದುಖ ನೋಡಲಾಗುತ್ತಿರಲಿಲ್ಲ. ದಶ ಲಕ್ಷ ಜನರ ಹಾರೈಕೆಯ ಮಾತನ್ನೇ ಗದ್ಗದಿತರಾಗಿ ಅವರು ಹೇಳಿದ್ದರು:
" ಅವರಿಗೆ ಏನೂ ಆಗಲ್ಲ"
ಆದರೆ ದೈವವಿಧಿಯನ್ನು ತಡೆಯುವವರಾರು?
ಆಗಬಾರದ್ದು, ಆಗಲೇ ಬಾರದ್ದು ಆಗಿ ಹೋಯಿತು. ಯಾವ ಸುದ್ಧಿ ಬಾರದಿರಲಿ ಎಂದು ನಾವೆಲ್ಲ ಮನದಾಳದ ಪ್ರಾರ್ಥನೆಯೊಂದಿಗೆ ಆಸೆ ಪಟ್ಟಿದ್ದೆವೋ ಆ ಸುದ್ದಿ ಹತ್ತು ಗಂಟೆಯ ಸುಮಾರಿಗೆ ಬಂದೇ ಬಿಟ್ಟಿತ್ತು. ಇಡೀ ಜಿಲ್ಲೆ ತಲ್ಲಣ ಗೊಂಡಿತ್ತು.
ಅದೆಷ್ಟೋ ಬಡಕುಟುಂಬಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಧಾರ್ಮಿಕ, ಸಾಮಾಜಿಕ ಕೇಂದ್ರಗಳಿಗೆ ಸಂಪನ್ಮೂಲ ನಿಧಿಯಾಗಿದ್ದ ಆ ಮಹಾನುಭಾವರನ್ನು ನಾವು ಕಳಕೊಂಡೆವು.
ಇಂತಹ ಒಬ್ಬ ಧುರೀಣರ ಅಕಾಲ ಅಂತ್ಯಕ್ಕೆ ಕಾರಣರಾದ ದುಷ್ಟ ಕೂಟವಿದೆಯಲ್ಲ! ನಿಜಕ್ಕೂ ಅದೊಂದು ಪಾಪಿಗಳ ಕಾಳಕೂಟ. ಮಮ್ತಾಝ್ ಅಲಿಯವರ ಸಹೋದರ ಮೊಯಿದೀನ್ ಬಾವ ರವರು ಮಾಧ್ಯಮ ಮುಂದೆ ಅಳುತ್ತಾ
" ಅವರಿಗೆ ಅಲ್ಲಾಹನ ಬಳಿ ನರಕ ಸೃಷ್ಟಿಯಾಗುತ್ತದೆ" ಎಂಬ ಮಾತು ನಿಜವಾಗುವುದು ಗ್ಯಾರಂಟಿ. ಕಾರಣ, ಮರ್ಧಿತನ ಪ್ರಾರ್ಥನೆಗೆ ಉತ್ತರವಿದೆ. ತಮ್ಮನನ್ನು ಮುಗಿಸಿದವರ ಮೇಲೆ ಅವರಿಗಿದ್ದ ತೀವ್ರ ಆಕ್ರೋಶದ ಆ ಮಾತನ್ನು ತಡೆಯಲಾಗದ ದುಖದಲ್ಲಿ ಅವರು ಹೇಳಿದ್ದರು. ಅದು ನಿಜವಾಗುವುದರಲ್ಲಿ ಸಂಶಯವೇ ಬೇಡ. ಕಾರಣ, ಆ ದುಷ್ಟ ಕೂಟವು ಮುಗಿಸಿದ್ದು ಒಂದು ಜೀವವನ್ನು ಮಾತ್ರವಲ್ಲ, ಲಕ್ಷಾಂತರ ಜನರ ಹೃದಯ ಮಿಡಿತವನ್ನು.
ಶೈಥಾನನ ರೂಪದಲ್ಲೂ ಬರುವ ಹೆಣ್ಣುಗಳಿದ್ದಾರೆ ಎಂಬ ಧಾರ್ಮಿಕ ನಂಬಿಕೆ ನಿಜವಾಗಿದೆ. ಮತ್ತೊಬ್ಬರ ರಕ್ತ ಕುಡಿದು ಕುಟುಂಬ ಸಾಕುವ ಖತರ್ನಾಕ್ ಗಂಡಸರ ಜೊತೆ ಶೈಥಾನ ರೂಪಿಣಿ ಹೆಣ್ಣು ಕೂಡಾ ಸೇರಿಕೊಂಡರೆ ಅದು ಶೈಥಾನಕ್ಕಿಂತಲೂ ದುಷ್ಟ ಕೂಟವಾಗಿ ಮಾರ್ಪಡುತ್ತದೆ. ಕಳೆದ ವರ್ಷ ಕೇರಳದಲ್ಲಿ ಹೊಟೇಲ್ ಮಾಲಕರೊಬ್ಬರನ್ನು ಬಲಿ ತೆಗೆದು ಕೊಂಡದ್ದು ಕೂಡಾ ಇಂತಹದ್ದೇ ಒಂದು ಪರಮದುಷ್ಟ ಕೂಟವಾಗಿತ್ತು.
ಇಷ್ಟು ದೊಡ್ಡ ಸಿರಿವಂತ, ಪ್ರಭಾವಿ ವ್ಯಕ್ತಿ ದುಷ್ಟ ಕೂಟಕ್ಕೆ ಹೆದರಿ ಜೀವನವನ್ನೇ ಮುಗಿಸಬೇಕಾಗಿರಲಿಲ್ಲ ಎಂದು ಹೇಳುವವರಿದ್ದಾರೆ. ಅಪಮಾನ, ಕುಟುಂಬದೊಳಗಿನ ತಗಾದೆ ಮುಂತಾದವುಗಳಿಂದ ಮನುಷ್ಯ ಯಾವ ವಿಧ ಕುಗ್ಗಿ ಹೋಗುತ್ತಾನೆಂದರೆ ಅವರಿಗೆ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಂಟ್ರೋಲ್ ಮಾಡಿಕೊಳ್ಳುವ ದೃಢ ಚಿತ್ತದವರೂ ಇಲ್ಲ ಎಂದಲ್ಲ, ಆದರೆ ಎಲ್ಲರಿಂದಲೂ ಅದು ಸಾಧ್ಯವಲ್ಲ. ಮರ್ಹೂಮ್ ಮಮ್ತಾಝ್ ಅಲಿಯವರ ಅಂತ್ಯವನ್ನು ನಾವು ಹಾಗೆ ಕಾಣುವುದೇ ಸೂಕ್ತ.
ಅಂತೂ ಓರ್ವ ಒಳ್ಳೆಯ ಮನುಷ್ಯ ಇನ್ನಿಲ್ಲವಾದರು. ಇದರ ಜೊತೆಗೆ ಹೆಣ್ಣೆಂಬ ಮೋಹಿನಿಯನ್ನು ಬಳಸಿ ದುಡ್ಡು ಮಾಡುವ ದುಷ್ಟ ಕೂಟವೂ ಇಲ್ಲದಾಗಬೇಕು. ಇನ್ನು ಮುಂದಿನ ನಮ್ಮ ಹೋರಾಟ ಮಮ್ತಾಝ್ ಅಲಿ ಎಂಬ ಧೀಮಂತರ ಸಾವಿಗೆ ಕಾರಣವಾದವರಿಗೆ ಸೂಕ್ತ ಶಿಕ್ಷೆ ಕೊಡಿಸುವುದಕ್ಕಾಗಬೇಕು. ಇನ್ನು ಯಾರೂ ಇಂತಹ ಷಡ್ಯಂತ್ರಕ್ಕೆ ಬಲಿಯಾಗಬಾರದು.
ಮಮ್ತಾಝ್ ಅಲಿಯವರಿಗೆ ಕುಟುಂಬ ಇದೆ. ಅಪಾರ ಅಭಿಮಾನಿಗಳಿದ್ದಾರೆ. ಅವರು ತೀವ್ರ ದುಖದಲ್ಲಿದ್ದಾರೆ. ಅವರ ಮೇಲಿನ ಕರುಣೆ ತೋರಿಯಾದರೂ ಇಲ್ಲ ಸಲ್ಲದ ಪೋಸ್ಟ್ ಗಳನ್ನು ಶೇರ್ ಮಾಡುವುದಾಗಲಿ, ಅವರ ಪಾರ್ಥಿವ ಶರೀರದ ಫೋಟೋವನ್ನು ಫಾರ್ವರ್ಡ್ ಮಾಡುವುದನ್ನಾಗಲಿ ಮಾಡಬಾರದೆಂದು ಭಿನ್ನವಿಸಿ ಕೊಳ್ಳುತ್ತಿದ್ದೇನೆ. " ಎಲ್ಲಾ ಪಾಪಗಳನ್ನು ಅಲ್ಲಾಹನು ಕ್ಷಮಿಸುತ್ತಾನೆ, ಅವನು ಕ್ಷಮಾಶೀಲನೂ ಕೃಪಾಳುವೂ ಆಗಿರುತ್ತಾನೆ" ಎಂದು ಖುರ್ ಆನಲ್ಲಿದೆ. ಅಲ್ಲಾಹನೇ ಪಾಪ ಕ್ಷಮಿಸುವಾಗ ಆಡಿಕೊಂಡು ಯಾಕೆ ಪಾಪ ಕಟ್ಟಿಕೊಳ್ಳಬೇಕು? ಎಲ್ಲರೂ ಮಮ್ತಾಝ್ ಅಲಿಯವರ ಆತ್ಮದ ಸದ್ಗತಿಗಾಗಿ ದುಆ ಮಾಡೋಣ