ಸಿದ್ದಿಕಿಗೆ ಹತ್ಯೆ ಪ್ರಕರಣ; ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ; ಸರ್ಕಾರವೇ ಹೊಣೆ: ರಾಹುಲ್ ಗಾಂಧಿ ವಾಗ್ದಾಳಿ
ಮುಂಬೈ: ಮಹಾರಾಷ್ಟ್ರದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸಿದ್ದಿಕ್ಕಿ ಅವರ ಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ರಾಜ್ಯ ಸರ್ಕಾರದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಕ್ಸ್ ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬಾಬಾ ಸಿದ್ದಿಕಿ ಜೀ ಅವರ ದುರಂತ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದೇನೆ, ತುಂಬಾ ನೋವು ತಂದಿದೆ. ಈ ಕಷ್ಟದ ಸಮಯದಲ್ಲಿ ನಾವು ಅವರ ಕುಟುಂಬದೊಂದಿಗೆ ಇರುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಈ ಭಯಾನಕ ಘಟನೆಯು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದನ್ನು ಬಹಿರಂಗಪಡಿಸುತ್ತದೆ. ಸರ್ಕಾರವೇ ಇದರ ಜವಾಬ್ದಾರಿ ವಹಿಸಬೇಕು. ಸಿದ್ದಿಕಿ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ನಟಿ ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್, ಸಂಜಯ್ ದತ್, ರಾಜ್ ಕುಂದ್ರಾ, ಇನ್ನೂ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಬಾಬಾ ಸಿದ್ದಿಕ್ಕಿ ಅವರೊಂದಿಗಿನ ನಿಕಟ ಬಾಂಧವ್ಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕುಟುಂಬದೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ.
ಸಲ್ಮಾನ್ ಖಾನ್ ನಿವಾಸಕ್ಕೆ ಹೆಚ್ಚಿದ ಭದ್ರತೆ
ಸಿದ್ದಿಕಿ ಹತ್ಯೆ ಹಿಂದೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯ್ ಕೈವಾಡ ಶಂಕೆ ವ್ಯಕ್ತವಾಗುತ್ತಿದ್ದಂತೆ ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ನಿವಾಸಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿತ್ತು. ಇದರಿಂದ ಅವರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಇದೀಗ ಸಿದ್ದಿಕ್ಕಿ ಹತ್ಯೆ ಬೆನ್ನಲ್ಲೇ ಭದ್ರತೆ ಹೆಚ್ಚಿಸಲಾಗಿದೆ.