ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅವಕಾಶ ನೀಡುವುದಿಲ್ಲ: ಅಮಿತ್ ಶಾಗೆ ತಿರುಗೇಟು ನೀಡಿದ  ಸಿಎಂ ಹೇಮಂತ್ ಸೊರೆನ್

ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅವಕಾಶ ನೀಡುವುದಿಲ್ಲ: ಅಮಿತ್ ಶಾಗೆ ತಿರುಗೇಟು ನೀಡಿದ ಸಿಎಂ ಹೇಮಂತ್ ಸೊರೆನ್

ಗರ್ವಾ: ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಹೇಮಂತ್ ಸೊರೆನ್ ಭಾನುವಾರ ಹೇಳಿದ್ದಾರೆ.

ಜಾರ್ಖಂಡ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ ತಿರುಗೇಟು ನೀಡಿರುವ ಸಿಎಂ ಹೇಮಂತ್ ಸೊರೆನ್, ಬುಡಕಟ್ಟು ಸಂಸ್ಕೃತಿ, ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸಲು ಚೋಟಾ ನಾಗ್ ಪುರ ಮತ್ತು ಸಂತಾಲ್ ಪರಗಣ ಹಿಡುವಳಿ ಕಾಯ್ದೆ ಗಳ ಜಾರಿಗೆ ಮಾತ್ರ ಜಾರ್ಖಂಡ್ ಬದ್ಧವಾಗಿದ್ದು, ಏಕರೂಪ ನಾಗರಿಕ ಸಂಹಿತೆ ಅಥವಾ NRC ಜಾರಿಯಾಗುವುದಿಲ್ಲ. ವಿಷ ಉಗುಳುವ ಬಿಜೆಪಿಯವರಿಗೆ ಆದಿವಾಸಿಗಳು, ಸ್ಥಳೀಯರು, ದಲಿತರು ಅಥವಾ ಹಿಂದುಳಿದ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಾರ್ಖಂಡ್‌ನಲ್ಲಿ ಭಾನುವಾರ ಮುಂಬರುವ ವಿಧಾನಸಭಾ ಚುನಾವಣೆಗೆ ಕೇಸರಿ ಪಕ್ಷದ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ನಮ್ಮ ಸರ್ಕಾರ ಜಾರ್ಖಂಡ್‌ನಲ್ಲಿ ಯುಸಿಸಿಯನ್ನು ಜಾರಿಗೆ ತರುತ್ತದೆ. ಆದರೆ ಬುಡಕಟ್ಟು ಜನಾಂಗದವರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಜೆಎಂಎಂ ಸರ್ಕಾರವು ಯುಸಿಸಿ ಬುಡಕಟ್ಟು ಹಕ್ಕುಗಳು ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ.ಇದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ ಎಂದು ಹೇಳಿದ್ದರು.

JMM ನೇತೃತ್ವದ ಒಕ್ಕೂಟ ಮಾವೋವಾದಿಗಳ ಬೆದರಿಕೆಯನ್ನು ಉತ್ತೇಜಿಸುತ್ತದೆ ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಹೇಮಂತ್ ಸೊರೆನ್ ಕಿಡಿಕಾರಿದರು. ಬಿಜೆಪಿಯನ್ನು "ಒಣಗುತ್ತಿರುವ ಮರ" ಕ್ಕೆ ಹೋಲಿಸಿದ ಸಿಎಂ, ಅದನ್ನು ಬೇರುಸಹಿತ ಕಿತ್ತುಹಾಕುವ ಪ್ರತಿಜ್ಞೆ ಮಾಡಿದರು. ಕಲ್ಲಿದ್ದಲು ಕಂಪನಿಗಳು ಗಣಿಗಾರಿಕೆಗಾಗಿ ರಾಜ್ಯಕ್ಕೆ ನೀಡಬೇಕಾದ ಕಲ್ಲಿದ್ದಲು ಬಾಕಿಯಲ್ಲಿ ಕೇಂದ್ರವು ಇನ್ನೂ 1.36 ಲಕ್ಷ ಕೋಟಿ ರೂ.ಗಳನ್ನು ಪಾವತಿಸಬೇಕಾಗಿದ್ದು, ಬಿಜೆಪಿಯು ತನ್ನ ಸರ್ಕಾರವನ್ನು ದುರ್ಬಲಗೊಳಿಸುತ್ತಿದೆ. ಬಾಂಗ್ಲಾದೇಶದ ಒಳನುಸುಳುವಿಕೆ ಕುರಿತು ಕೇಂದ್ರದ ನಿಲುವನ್ನು ಪ್ರಶ್ನಿಸಿದ ಸೊರೆನ್, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತಕ್ಕೆ ಬಂದಿಳಿಯಲು ಸರ್ಕಾರ ಏಕೆ ಅನುಮತಿ ನೀಡಿತು ಎಂದು ಟೀಕಾ ಪ್ರಹಾರ ನಡೆಸಿದರು.

ರಾಜ್ಯದಲ್ಲಿ 81 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article