ಉಚ್ಚಿಲ ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ ಢಿಕ್ಕಿ; ಗಂಭೀರ ಗಾಯಗೊಂಡವನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಉಚ್ಚಿಲದ ಯುವಕರ ತಂಡ
ಉಚ್ಚಿಲ: ರಸ್ತೆ ದಾಟುತ್ತಿದ್ದ ಯುವಕನೋರ್ವನಿಗೆ ಬಸ್ಸೊಂದು ಢಿಕ್ಕಿಯಾದ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದು, ಈ ವೇಳೆ ತಕ್ಷಣ ಸ್ಪಂದಿಸಿದ ಉಚ್ಚಿಲದ ಯುವಕರ ತಂಡ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಗುರುವಾರ ಬೆಳಗ್ಗೆ ಉಚ್ಚಿಲ ಪೇಟೆಯಲ್ಲಿ ನಡೆದಿದೆ.
ಗಾಯಗೊಂಡ ಯುವಕನನ್ನು ಎರ್ಮಾಳ್ ಬಗ್ಗತೋಟದ ಪ್ರಶೀಲ್ ಎಲ್.ಸುವರ್ಣ ಎಂದು ಗುರುತಿಸಲಾಗಿದೆ. ಪ್ರಶೀಲ್ ಎಲ್.ಸುವರ್ಣ ಮಂಗಳೂರು ಕಡೆ ಹೋಗಲು ರಾಧಾ ಹೋಟೆಲ್ ಬಳಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ಉಡುಪಿ ಕಡೆ ಹೊರಟಿದ್ದ ಐಡಿಯಲ್ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಈ ವೇಳೆ ಆತ ಗಂಭೀರ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದಾನೆ. ಈ ವೇಳೆ ದೌಡಾಯಿಸಿದ ಉಚ್ಚಿಲದ ಆಪತ್ಬಾಂದವನೆಂದೇ ಖ್ಯಾತಿಯ ಜಲಾಲುದ್ದೀನ್ ಉಚ್ಚಿಲ(ಜಲ್ಲು), ಸಾಧಿಕ್ NH, SDPI ಅಂಬ್ಯುಲೆನ್ಸ್ ಕಾರು ಚಾಲಕ ನವಾಜ್, ರಿಕ್ಷಾ ಚಾಲಕರಾದ ರಫೀಕ್, ಹನೀಫ್ 313, ಇಬ್ರಾಹಿಂ, ಶಾಬಾನ್ NH ಸೇರಿದಂತೆ ಯುವಕರ ತಂಡ ಗಾಯಾಳುವನ್ನು SDPI ಅಂಬ್ಯುಲೆನ್ಸ್ ಮೂಲಕ ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಿದೆ.
ಉಚ್ಚಿಲ ಸುತ್ತಮುತ್ತ ಯಾವುದೇ ಅಪಘಾತ, ಅನಾಹುತಗಳು ಸಂಭವಿಸಿದ ತಕ್ಷಣವೇ ಜಲಾಲುದ್ದೀನ್ ಉಚ್ಚಿಲ(ಜಲ್ಲು) ಹಾಗು ಅವರ ಸಂಗಡಿಗರ ತಂಡ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.