ಉಡುಪಿಯಲ್ಲಿ ಪೊಲೀಸ್ ಎನ್ ಕೌಂಟರ್'ಗೆ ನಕ್ಸಲ್ ನಾಯಕ ವಿಕ್ರಮ್ ಗೌಡ ಬಲಿ
ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎಎನ್ಎಫ್ ಕಾರ್ಯಾಚರಣೆಗೆ ಮುಂದಾಗಿತ್ತು.
ನಿನ್ನೆ ಮಧ್ಯರಾತ್ರಿ 5 ಮಂದಿ ನಕ್ಸಲರ ತಂಡ ಸೀತಂಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಕೂಂಬಿಂಗ್ ಶುರುವಾಗಿದೆ.
ಈ ಕೂಂಬಿಂಗ್ನಲ್ಲಿ ಕಬ್ಬಿನಾಲೆ ಮೂಲದ ವಿಕ್ರಂ ಗೌಡ ಇದ್ದ ಎನ್ನಲಾಗಿದ್ದು, ಗುಂಡಿನ ದಾಳಿಗೆ ಈತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಇನ್ನುಳಿದ ನಕ್ಸಲರಿಗಾಗಿ ತೀವ್ರ ಶೋಧಕಾರ್ಯ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ. ಹತನಾಗಿದರುವ ವಿಕ್ರಮ್ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕನಾಗಿದ್ದ.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.
ನಂತರ ನಕ್ಸಲರ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದೆ.ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಲೆನಾಡು ಹಾಗೂ ಕರವಾಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನಗಳು ವ್ಯಕ್ತವಾಗಿವೆ.