ಅನಂತಾಡಿಯ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಡಿ.8ರಂದು ಜೈವಿಕ ಕಣಜದ ಸ್ಥಾಪನೆ: ಪ್ರೊ. ಎಸ್. ಎ. ಕೃಷ್ಣಯ್ಯ
ಉಡುಪಿ: ಇಲ್ಲಿನ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಮತ್ತು ಪ್ರಾಚ್ಯ ತೌಳವ ಕರ್ನಾಟ ವತಿಯಿಂದ ದಕ ಜಿಲ್ಲೆಯ ಅನಂತಾಡಿಯ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಡಿ.8ರಂದು ಮಧ್ಯಾಹ್ನ 3ರಿಂದ 5ರವರೆಗೆ ಜೈವಿಕ ಕಣಜದ ಸ್ಥಾಪನೆ ನಡೆಯಲಿದೆ ಎಂದು ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪ್ರೊ. ಎಸ್. ಎ. ಕೃಷ್ಣಯ್ಯ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು. ಅನಂತಾಡಿ ಗೋಳಿಕಟ್ಟೆ ಪ್ರಾಚ್ಯ ವೈದ್ಯರತ್ನ ಶ್ರೀ ಗಂಗಾಧರ ಕರಿಯ ಪಂಡಿತ್ ಅವರ ಸಹಕಾರದಲ್ಲಿ ಈ ಕಣಜದಲ್ಲಿ ವಿನಾಶದಂಚಿನಲ್ಲಿರುವ ಶ್ರೀ ತಾಳೆ ಮರ ಮತ್ತು ಇತರ ಅಪರೂಪದ ಸಸ್ಯವೈವಿಧ್ಯಗಳ ಬೀಜಗಳನ್ನು ಸಂಗ್ರಹಿಸಲಾಗುತ್ತದೆ ಮತ್ತು ಅವುಗಳನ್ನು ದಾನ ಮಾಡುವ, ಬಿತ್ತಿ ಬೆಳೆಸುವ ಸಂಕಲ್ಪ ಕೈಗೊಳ್ಳಲಾಗುತ್ತದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಬಿದರೆಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಬೆಳ್ಳಿಪಾಡಿ ನರೇಂದ್ರ ರೈ ನೆಲ್ತೊಟ್ಟು ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಶ್ರೀ ಧ. ಮಂ. ತುಳು ಪೀಠದ ಸಂಯೋಜಕ ಡಾ. ಮಾಧವ ಎಂ. ಕೆ., ಪ್ರಾಚ್ಯ ಸಂಚಯ ಕೇಂದ್ರದ ಗೌರವ ಅಧ್ಯಕ್ಷ ವಿಶ್ವನಾಥ ಶೆಣೈ, ಪರಿಸರ ಚಿಂತಕ ಪ್ರಶಾಂತ್ ಕಾಮತ್, ಹಿರಿಯ ಪತ್ರಕರ್ತರಾದ ಎಂ. ರಘುರಾಮ್ ಮತ್ತು ಡಾ. ಅಮೃತ ಮಲ್ಲ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಾಜ ಚಿಂತಕ ಪ್ರಶಾಂತ್ ಕಾಮತ್ ಮತ್ತು ಪರಿಸರ ಪ್ರೇಮಿ ಗಣೇಶ್ ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.