
ಉಚ್ಚಿಲದಲ್ಲಿ ನಿಲ್ಲದ ಅಪಘಾತ! ನಿರಂತರವಾಗಿ ನಡೆಯುತ್ತಿರುವ ಜೀವ ಬಲಿಗೆ ಕೊನೆ ಯಾವಾಗ? ದಿನನಿತ್ಯ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ-ಸಾರ್ವಜನಿಕರಲ್ಲಿ ಆತಂಕ! ಹೋರಾಟದ ಎಚ್ಚರಿಕೆ ನೀಡಿದ 'ಉಚ್ಚಿಲ ನಾಗರಿಕ ಹೋರಾಟ ಸಮಿತಿ'
![]() |
ಮಂಗಳವಾರ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಮಂಜುನಾಥ್ |
ಉಚ್ಚಿಲ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ಈಗ ಅಕ್ಷರಶಃ ಸಾವಿನ ಮನೆಗೆ ಆಮಂತ್ರಣ ನೀಡುವ ಅಪಘಾತ ವಲಯವಾಗಿದೆ. ಇಲ್ಲಿ ದಿನನಿತ್ಯ ಹೆಚ್ಚುತ್ತಿರುವ ಅಪಘಾತಗಳಲ್ಲಿ ಹಲವಾರು ಮಂದಿ ಜೀವ ಕಳೆದುಕೊಂಡಿದ್ದರೆ, ನೂರಾರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಇಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ, ನಮ್ಮನ್ನಾಳುವ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ರೀತಿಯ ಚಕಾರವೆತ್ತುತ್ತಿಲ್ಲ.
ಇಲ್ಲಿ ಆಗಾಗ್ಗೆ ಒಂದಲ್ಲೊಂದು ಅಪಘಾತಗಳು ನಡೆಯುತ್ತಿಲೇ ಇವೆ. ಆದರೂ, ಸಂಬಂಧಿಸಿದ ಇಲಾಖೆಗಳು ಮಾತ್ರ ಅಪಘಾತದಲ್ಲಿ ಸಂಭವಿಸುವ ಸಾವುಗಳಿಗೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ಕಣ್ಣುಮುಚ್ಚಿಕೊಂಡು ಕುಳಿತಿವೆ. ಹೀಗಾಗಿ ಇಲ್ಲಿ ಇನ್ನೆಷ್ಟು ಬಲಿ ಎಂಬ ಭೀತಿ ಸಾರ್ವಜನಿಕರಲ್ಲಿ ಅವರಿಸಿಕೊಂಡಿದೆ!

ಉಡುಪಿ-ಮಗಳೂರು ನಡುವಿನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಕ್ತ ರೀತಿಯ ವ್ಯವಸ್ಥೆ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ.
ಅಪಘಾತಕ್ಕೆ ಮುಖ್ಯ ಕಾರಣ.....
ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯವಾಗಿ ರಸ್ತೆ ದಾಟಲು(Road Crossing) ವ್ಯವಸ್ಥೆ ಇಲ್ಲ, ಬ್ಯಾರಿಕೇಡ್ ಸಮಸ್ಯೆ, ರಾತ್ರಿ ಬೀದಿದೀಪ ಉರಿಯುತ್ತಿಲ್ಲ, ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲ, ಬೈಪಾಸ್ ರಸ್ತೆ ಇದ್ದರೂ ಸಮರ್ಪಕವಾಗಿಲ್ಲ, ಈ ಎಲ್ಲ ಕಾರಣದಿಂದಲೇ ಉಚ್ಚಿಲ ಪೇಟೆ ಸೇರಿದಂತೆ ಎರ್ಮಾಳ್-ಮೂಳೂರುನಲ್ಲಿಯೂ ಅಪಘಾತ ಹೆಚ್ಚುತ್ತಿದ್ದು, ಹಲವು ಜೀವ ಈಗಾಗಲೇ ಬಲಿಯಾಗಿದೆ.
ಎಚ್ಚರಗೊಳ್ಳದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ-ಇಲಾಖೆ!
ಇದೆಲ್ಲವನ್ನು ಮಾಡಬೇಕಾದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವಾಗಲಿ, ನಿರ್ವಹಣೆ ಮಾಡುತ್ತಿರುವ ಟೋಲ್'ನವರಾಗಲಿ, ಆಡಳಿತ ವ್ಯವಸ್ಥೆಯಾಗಲಿ ಇತ್ತ ಗಮನ ನೀಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ರಸ್ತೆ ದಾಟುವುದಕ್ಕೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದರಿಂದ ಉಚ್ಚಿಲ ಪೇಟೆಯಲ್ಲಿ ಜನ ಎಲ್ಲಂದರಲ್ಲಿ ಹೆದ್ದಾರಿಯನ್ನು ದಾಟುತ್ತಿದ್ದು, ಇದರಿಂದ ಅಪಘಾತ ಎಂಬುದು ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. SDPI ಅವರ ಅಂಬ್ಯುಲೆನ್ಸ್ ಈ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುವವರನ್ನು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸುತ್ತಿದೆ. ಜೊತೆಗೆ ಇಲ್ಲಿನ ಯುವಕರ ತಂಡವೊಂದು ಪ್ರತಿನಿತ್ಯ ಅಪಘಾತಗಳಲ್ಲಿ ಗಾಯಗೊಂಡವರ ಶುಶ್ರೂಷೆಯನ್ನು ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಂದೇ ತಿಂಗಳಲ್ಲಿ ಹಲವು ಜೀವ ಬಲಿ!
ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಉಚ್ಚಿಲ ಪಡುವಿನ ಶಿವಪ್ಪ ಪೂಜಾರಿ, ಕುಂಜೂರು ನಿವಾಸಿ ಶ್ರೀನಿವಾಸ ತೋಣಿತ್ತಾಯ ಸೇರಿದಂತೆ ಕಳೆದ ಒಂದು ತಿಂಗಳಿನಿಂದ ಹಲವು ಜೀವಗಳು ಬಲಿಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.
ಇಂದಿನ ಅಪಘಾತದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಅಂಗಗಳು!
ಮಂಗಳವಾರ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಹಾವೇರಿ ಮೂಲದ ಮಂಜುನಾಥ್ (48) ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲದ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಅಪಘಾತದಿಂದ ಮಂಜುನಾಥ್ ಅವರ ದೇಹ ಛಿದ್ರಗೊಂಡಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿತ್ತು.
ಅಪಘಾತಕ್ಕೆ ಕಡಿವಾಣ ಹಾಕಲು 'ಉಚ್ಚಿಲ ನಾಗರಿಕ ಹೋರಾಟ ಸಮಿತಿ' ರಚನೆ
ಉಚ್ಚಿಲ, ಸುತ್ತಮುತ್ತ ಅಪಘಾತಕ್ಕೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಈಗ ಸಾರ್ವಜನಿಕರು ಎಚ್ಚೆತ್ತುಕೊಂಡಿದ್ದು, ಅಪಘಾತಕ್ಕೆ ಕಡಿವಾಣ ಹಾಕಲು 'ಉಚ್ಚಿಲ ನಾಗರಿಕ ಹೋರಾಟ ಸಮಿತಿ'ಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯು ಅಪಘಾತವನ್ನು ತಪ್ಪಿಸುವ ಮೂಲಕ ಜನರ ಅಮೂಲ್ಯ ಜೀವವನ್ನು ಉಳಿಸುವುದಕ್ಕೆ ಪ್ರಾಧಿಕಾರ, ಟೋಲ್ ವಿರುದ್ಧ ತೀವ್ರ ಹೋರಾಟ ನಡೆಸಲು ಮುಂದಾಗಿದ್ದಾರೆ.
ಈ ಸಮಿತಿಯಯ ಅಧ್ಯಕ್ಷರಾಗಿ ಸಿರಾಜ್ NH, ಉಪಾಧ್ಯಕ್ಷರಾಗಿ ವೇದವ್ಯಾಸ್-ಪುಟ್ಟಮ್ಮ ಎರ್ಮಾಳ್, ಕಾರ್ಯದರ್ಶಿಯಾಗಿ ಸುಕುಮಾರ್ ಹಾಗು ಜೊತೆ ಕಾರ್ಯದರ್ಶಿ ಆಗಿ ಜಲಾಲುದ್ದೀನ್ ನೇಮಕಗೊಂಡಿದ್ದು, ಮುಂದಿನ ಹೋರಾಟಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಜೊತೆಗೆ ಮಂಗಳವಾರ ಉಚ್ಚಿಲದ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿರುವ ಹಾವೇರಿ ಮೂಲದ ಮಂಜುನಾಥ್ ಅವರ ಪರವಾಗಿ ಸಮಿತಿಯಯ ಅಧ್ಯಕ್ಷ ಸಿರಾಜ್ NH, ಪಡುಬಿದ್ರೆ ಠಾಣೆಗೆ ದೂರು ನೀಡಿದ್ದು, ರಾ.ಹೆದ್ದಾರಿ ಯೋಜನಾ ನಿರ್ದೇಶಕರು, ಟೋಲ್ ಮೆನೇಜರ್ ಹಾಗು ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಚಾಲಕನ ವಿರುದ್ಧ ದೂರು ನೀಡಿದ್ದಾರೆ.
ಉಗ್ರ ಹೋರಾಟಕ್ಕೆ ಮುಂದಾಗಿರುವ ಸಮಿತಿ: ಸಿರಾಜ್ NH
ಕಳೆದ ಹಲವಾರು ಸಮಯಗಳಿಂದ ಉಚ್ಚಿಲ ಪೇಟ ಹಾಗು ಸುತ್ತಮುತ್ತ ನಡೆಯುತ್ತಿರುವ ಅಪಘಾತಗಳಿಂದ ಹಲವಾರು ಮಂದಿ ಜೀವಗಳನ್ನು ಕಳೆದುಕೊಂಡಿದ್ದು, ಹಲವು ಮಂದಿ ಗಾಯಗೊಂಡು ಅಂಗಾಗಗಳನ್ನು ಕಳೆದುಕೊಂಡಿದ್ದಾರೆ, ಈ ಎಲ್ಲ ಅಪಘಾತಗಳಿಗೆ ಕಡಿವಾಣ ಹಾಕಲು ನಾವು ಸಮಿತಿ ರಚಿಸಿದ್ದು, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಿರಾಜ್ ನೀಡಿದ್ದಾರೆ.
ಉಚ್ಚಿಲ ಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಕಡಿವಾಣ ಹಾಕಲು ರಸ್ತೆ ದಾಟಲು(Road Crossing) ವ್ಯವಸ್ಥೆ ಮಾಡಬೇಕು, ಬ್ಯಾರಿಕೇಡ್ ಹಾಕಬೇಕು, ರಾತ್ರಿ ಬೀದಿದೀಪ ಉರಿಯುವಂತೆ ಮಾಡಬೇಕು, ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ವ್ಯವಸ್ಥೆ ಮಾಡಬೇಕು, ಬೈಪಾಸ್ ರಸ್ತೆಯನ್ನು ಇನ್ನಷ್ಟು ಸಮರ್ಪಕವಾಗಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಯನ್ನು ರಾ.ಹೆದ್ದಾರಿ ಪ್ರಾಧಿಕಾರ ಹಾಗು ನಿರ್ವಹಣೆ ಮಾಡುತ್ತಿರುವ ಟೋಲ್'ನವರ ಮುಂದಿಟ್ಟು ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಇದರ ರೂಪು ರೇಷೆಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಸಿರಾಜ್ ತಿಳಿಸಿದ್ದಾರೆ.