ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್‍ಐಎ ತನಿಖೆಗೆ ಒತ್ತಾಯ; ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ
ಬೆಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಎನ್‍ಐಎ ತನಿಖೆ ಆಗಬೇಕು. ಈ ವಿಷಯದಲ್ಲಿ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಆಗ್ರಹಿಸಿ ಆದೇಶ ಮಾಡಿಸಲು ವಿನಂತಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಹಾಸ್ ಹತ್ಯೆ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಯ ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದ್ದರಿಂದ ನಮ್ಮೆಲ್ಲ ಜನಪ್ರತಿನಿಧಿಗಳು, ಸುಹಾಸ್ ಮನೆಯವರು, ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಚರ್ಚೆ ನಡೆಯುತ್ತಿದೆ ಎಂದರು.
ಸುಹಾಸ್ ಹತ್ಯೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಮಂಗಳೂರು ಚಲೋ ಮಾಡಲು ತೀರ್ಮಾನ ಮಾಡಿದ್ದೆವು. ‘ಆಪರೇಷನ್ ಸಿಂಧೂರ್’ ಪ್ರಾರಂಭವಾದ ಸಂದರ್ಭದಲ್ಲಿ ಶಾಂತಿ ಕಾಪಾಡಲು ಮತ್ತು ದೇಶದ ಜೊತೆ ನಿಲ್ಲಬೇಕೆಂದು ಹಾಗೇ ಇದ್ದೆವು. ಆದರೆ, ಸುಹಾಸ್ ಹತ್ಯೆ ಆದ ನಂತರದಲ್ಲಿ ನಡೆಯುತ್ತಿರುವ ತನಿಖೆಯು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ ಎಂದು ಟೀಕಿಸಿದರು.
ಕೊಲೆಯಾದ ಸುಹಾಸ್ ಶೆಟ್ಟಿ ಅವರ ತಾಯಿ, ತಂದೆ ಮತ್ತು ಮಾವನ ಜೊತೆ ಸೇರಿ ಬಿಜೆಪಿ ಶಾಸಕರು, ಪ್ರಮುಖರ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದೆ ಎಂದು ವಿವರಿಸಿದರು.
ಹತ್ಯೆಗೆ ಅನೇಕ ಕಾರುಗಳನ್ನು ಬಳಸಿದ್ದರೂ ಒಂದೆರಡು ಕಾರನ್ನಷ್ಟೇ ವಶಕ್ಕೆ ಪಡೆದಿದ್ದಾರೆ. ಕೇವಲ 10 ಜನರನ್ನಷ್ಟೇ ಬಂಧಿಸಿದ್ದಾರೆ. ಇನ್ನೂ 15- 20 ಜನರು ಇದರ ಹಿಂದಿರುವ ಮಾಹಿತಿ ಸಿಗುತ್ತಿದೆ. ಕೊಲೆಗಾರರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದ್ದ ಮಹಿಳೆಯರನ್ನು ಬಂಧಿಸಿಲ್ಲ. ಹೊರದೇಶದಿಂದಲೂ ಹಣ ಬಂದ ಮಾಹಿತಿ ಸಿಗುತ್ತಿದೆ ಎಂದು ತಿಳಿಸಿದರು.
ಕೊಲೆಯಲ್ಲಿ ಭಾಗಿ ಆದವರಿಗೆ ಪಿಎಫ್‍ಐ ಜೊತೆ ಮಾಹಿತಿ ಇರುವ ವಿಷಯ ಹೊರಬರುತ್ತಿದೆ. ಇದರ ಜೊತೆಗೇ ಬೇರೆ ಇಬ್ಬರು, ಮೂವರು ಕಾರ್ಯಕರ್ತರಿಗೆ ‘ಸುಹಾಸ್ ಅವರ ಮರ್ಡರ್ ಮಾಡಿದ್ದೇವೆ. ಮುಂದಿನ ಗುರಿ ನೀವು’ ಎಂಬ ಬೆದರಿಕೆಯನ್ನೂ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಫಾಝಿಲ್ ಅವರ ಕುಟುಂಬದವರು ಇದರಲ್ಲಿ ಇಲ್ಲ ಎಂದು ಸ್ಪೀಕರ್ ಅವರ ಹೇಳಿಕೆಯು ಪರೋಕ್ಷವಾಗಿ ರಕ್ಷಣೆ ಕೊಡುವಂತಿದೆ. ಗೃಹ ಸಚಿವ ಪರಮೇಶ್ವರ್ ಅವರು, ತನಿಖೆ ಪ್ರಾರಂಭಕ್ಕೂ ಮೊದಲು ಎನ್‍ಐಎಗೆ ಕೊಡಲು ಸಾಧ್ಯ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಳಿಂದ ಅಲ್ಲಿನ ಪೊಲೀಸರು ಯಾವ ರೀತಿ ಪ್ರಾಮಾಣಿಕವಾಗಿ ತನಿಖೆ ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು.
ಸ್ಥಳೀಯ ಕಾಂಗ್ರೆಸ್ ನಾಯಕರು ಆ ಕುಟುಂಬವನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಮಂಗಳೂರಿಗೆ ಬಂದಿದ್ದ ಗೃಹ ಸಚಿವರು, ಅಲ್ಪಸಂಖ್ಯಾತ ಮುಖಂಡರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಹೊರಕ್ಕೆ ಹೋಗಲೂ ಬಿಡುವುದಿಲ್ಲ. ಗೃಹ ಸಚಿವರನ್ನು ತಡೆಯುವ ಕೆಲಸವನ್ನೂ ಮಾಡಿದ್ದಾರೆ ಎಂದರು. ಸುಹಾಸ್ ಅವರ ಹತ್ಯೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿಲ್ಲ. ಆದರೆ, ಬೆದರಿಕೆ ಬಂದ ಉಳಿದ ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯಪಾಲರ ಭೇಟಿ ವೇಳೆ ಸುಹಾಸ್ ತಾಯಿ ಸುಲೋಚನಾ ಶೆಟ್ಟಿ, ಮಾವ ರಾಜೇಶ್ ಭಂಡಾರಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ವಿಧಾನಸಭೆಯ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.