
RCB ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರಿ ನೂಕುನುಗ್ಗಲು: ನಾಲ್ವರು RCB ಅಭಿಮಾನಿಗಳ ಸಾವು; 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ!
ಬೆಂಗಳೂರು: 18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ ನಾಲ್ವರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ನೂಕುನುಗ್ಗಲಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಬುಧವಾರ ಸಂಜೆ ಏಕಾಏಕಿ ಸಾವಿರಾರು ಸಂಖ್ಯೆಯಲ್ಲಿ ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನುಗ್ಗಿದರು. ಸ್ಟೇಡಿಯಂ ಭರ್ತಿಯಾದ ಹಿನ್ನೆಲೆ ಗೇಟ್ ಬಂದ್ ಮಾಡಲಾಗಿತ್ತು. ಈ ವೇಳೆ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿದೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಒಳಗೆ ನುಗ್ಗಲು ಯತ್ನಿಸಿದಾಗ ಗೇಟ್ ಒಂದು ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಕೂಡಲೇ ಪೊಲೀಸರು ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿದರು.
ಕಬ್ಬಿಣದ ಬೃಹದಾಕಾರದ ಗೇಟ್ ಕುಸಿದ ಕೂಡಲೇ ಅದನ್ನು ಹಿಡಿದು ನಿಂತಿದ್ದ ಗೇಟ್ ಕೆಳಗೆ ಸಿಲುಕಿಕೊಂಡರು. ಆ ಪೈಕಿ 10 ಮಂದಿಗೆ ಹೆಚ್ಚಿನ ಗಾಯಗಳಾದವು. 4 ಮಂದಿಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ. ಪೊಲೀಸರು ಆಂಬ್ಯುಲೆನ್ಸ್ ಸಹಾಯದಿಂದ ಸಮೀದಪ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಿದರು.
18, 19, ಮತ್ತು 20ನೇ ಗೇಟ್ ಓಪನ್ ಆಗುತ್ತಿದ್ದಂತೆ ಅಭಿಮಾನಿಗಳು ಏಕಾಏಕಿ ಒಳನುಗ್ಗಿದ್ದು, ತಳ್ಳಾಟ, ನೂಕುನುಗ್ಗಲು ಉಂಟಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಆರ್ ಸಿಬಿ ಆಟಗಾರರು ಆಗಮಿಸುವ ಗೇಟ್ ನಂಬರ್ 12 ರ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದ ವೇಳೆ ಭಾರಿ ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಕಾರಿನಲ್ಲಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಯಿತು.
ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನೂ ಗೇಟ್ ನಂಬರ್ 6 ರ ಬಳಿ ಯುವಕನೋರ್ವ ಗೇಟ್ ಹತ್ತಲು ಹೋಗಿ ಕಾಲು ಮುರಿದುಕೊಂಡಿರುವುದಾಗಿ ವರದಿಯಾಗಿದೆ. ಭಾರಿ ಜನ ಹಾಗೂ ವಾಹನ ದಟ್ಟಣೆಯಿಂದಾಗಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.