ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿರುವ "ಉಡುಪಿ ಉಚ್ಚಿಲ ದಸರಾ -2025"ಕ್ಕೆ ಭರ್ಜರಿ ಸಿದ್ಧತೆ; ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಲಿದೆ ಈ ಬಾರಿಯ 'ಸಾಂಸ್ಕೃತಿಕ' ಕಾರ್ಯಕ್ರಮ

ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿರುವ "ಉಡುಪಿ ಉಚ್ಚಿಲ ದಸರಾ -2025"ಕ್ಕೆ ಭರ್ಜರಿ ಸಿದ್ಧತೆ; ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಯಲಿದೆ ಈ ಬಾರಿಯ 'ಸಾಂಸ್ಕೃತಿಕ' ಕಾರ್ಯಕ್ರಮ


ಉಚ್ಚಿಲ: ಕಳೆದ ವರ್ಷ ಅಭೂತಪೂರ್ವ ಯಶಸ್ಸು ಕಂಡಿರುವ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ನಾಲ್ಕನೇ ವರ್ಷದ "ಉಡುಪಿ ಉಚ್ಚಿಲ ದಸರಾ -2025"ಕ್ಕೆ ಭರ್ಜರಿ ಸಿದ್ಧತೆ ಕೈಗೊಳ್ಳಲಾಗಿದ್ದು, ಸೆ. 22ರಿಂದ ಅ.2ರವರೆಗೆ ವೈಭವ ಪೂರಿತವಾಗಿ ನಡೆಯಲಿದೆ.

ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಬಾರಿ ಬಹಳ ವಿಜೃಂಭಣೆಯಿಂದ ಅದ್ದೂರಿಯಾಗಿ ನಡೆಸಲು ಸಂಘಟಕರು ನಿರ್ಧರಿಸಿದ್ದು, ಅದಕ್ಕೆ ಬೇಕಾದ ಎಲ್ಲ ರೀತಿ ಸಕಲ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.

ಈ ಬಾರಿ ಅದ್ದೂರಿಯಾಗಿ ನಡೆಯುತ್ತೆ ದಸರಾ-ಸಿದ್ಧತೆ ಪೂರ್ಣ: ಡಾ.ಜಿ. ಶಂಕರ್

ಕಳೆದ ಬಾರಿಗಿಂತಲೂ ಈ ಬಾರಿ ಅದ್ದೂರಿಯಾಗಿ, ಉತ್ತಮ ರೀತಿಯಲ್ಲಿ ಆ ತಾಯಿಯ ಆಶೀರ್ವಾದದಿಂದ ಉಚ್ಚಿಲ ದಸರಾ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದೆ. ಈ ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಇನ್ನಿತರ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿ ಬರಲಿದೆ ಎಂದು ದಸರಾ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್ ಹೇಳಿದ್ದಾರೆ.

ದಾಖಲೆ ಬರೆಯುವತ್ತ ಉಚ್ಚಿಲ ದಸರಾ

ದ.ಕ. ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ ದಸರಾ ಮಹೋತ್ಸವ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಉಚ್ಚಿಲ ದಸರಾ ಉತ್ಸವವು ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ ದಸರಾ ವೈಭವದ ಮಾದರಿಯಲ್ಲೇ ಅಚ್ಚುಕಟ್ಟಾಗಿ ನಡೆಯುತ್ತಿದ್ದು ಹೊಸ ದಾಖಲೆ ಬರೆಯವತ್ತ ಹೆಜ್ಜೆಯನ್ನಿಡುತ್ತಿದ್ದು, ಇದಕ್ಕಾಗಿ ಉಚ್ಚಿಲ ದಸರಾ ರೂವಾರಿ ಡಾ| ಜಿ.ಶಂಕರ್‌, ಸಂಘದ ಅಧ್ಯಕ್ಷ ಜಯ ಸಿ ಸುವರ್ಣ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್‌ಕುಮಾರ್‌ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ  ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್‌ ಹಾಗೂ ಉಚ್ಚಿಲ ದಸರಾ ಸಮಿತಿಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ.


ದೇಶ-ವಿದೇಶಗಳ ಭಕ್ತರ ಆಕರ್ಷಣೆಯ ಕೇಂದ್ರ

ಸತತ ನಾಲ್ಕು ವರ್ಷಗಳಿಂದ "ಉಡುಪಿ ಉಚ್ಚಿಲ ದಸರಾ" ದೇಶ-ವಿದೇಶಗಳಿಂದಲೂ ಖ್ಯಾತಿ ಗಳಿಸಿದ್ದು, ಕರ್ನಾಟಕವಲ್ಲದೇ ದೇಶದ ವಿವಿಧ ಕಡೆಗಳಿಂದಲೂ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ಸು ಕಂಡಿದೆ. ಗಲ್ಫ್ ಸೇರಿದಂತೆ ಇತರ ದೇಶಗಳಿಂದಲೂ ಜನ "ಉಡುಪಿ ಉಚ್ಚಿಲ ದಸರಾ' ಕಂಡು ಧನ್ಯರಾಗಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 

ಲಕ್ಷಾಂತರ ಜನ ಸೇರುವ ನಿರೀಕ್ಷೆ

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೇ ಈ ಅದ್ದೂರಿಯ ದಸರಾ ನಡೆಯುತ್ತಿರುವುದರಿಂದ ಜನರಿಗೆ ಬಂದು ಹೋಗಲು ಬಹಳಷ್ಟು ಸುಲಭವಾಗುತ್ತಿದ್ದು, ಜನ ಸಾಗರವೇ ಹರಿದು ಬರುತ್ತಿದೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಾರಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗು ಸಂಘಟಕರು ಮಾಡಿಕೊಂಡಿದ್ದಾರೆ. 


ಪೂಜಾ ವಿಧಿವಿಧಾನಗಳು... 

ಮಹಾಲಕ್ಷ್ಮೀ ದೇವರ ಸನ್ನಿಧಿಯಲ್ಲಿ ನಿತ್ಯ ಚಂಡಿಕಾಹೋಮ, ಕಲ್ಲೋಕ್ತ ಪೂಜೆ, ಶ್ರೀ ಶಾರದಾ ಮಾತೆ ಮತ್ತು ಶ್ರೀ ನವದುರ್ಗೆಯರಿಗೆ ಪೂಜೆ, ಕುಂಕುಮಾರ್ಚನೆ, ಭಜನೆ ಹಾಗೂ ನಿತ್ಯ ಅನ್ನದಾಸೋಹಕ್ಕೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. 

ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಸ್ಥಾನ 

ಮಹಾಲಕ್ಷ್ಮೀ ದೇವಸ್ಥಾನದ ಸುತ್ತಲೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿರುವ ಜೊತೆಗೆ ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರಿಂದ ಕಾಪು  ಮತ್ತು ಕೊಪ್ಪಲಂಗಡಿಯಿಂದ ಲೈಟ್ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. 

ಭವ್ಯ ಮಂಟಪ ನಿರ್ಮಾಣ 

ದೇವಸ್ಥಾನದ ಆವರಣದಲ್ಲಿರುವ ಶ್ರೀಮತಿ ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆಗೆ 160 ಅಡಿ ಉದ್ದ 22 ಅಡಿ  ಎತ್ತರದ ಮಂಟಪವನ್ನು ಕೊಲ್ಲೂರು ದೇವಸ್ಥಾನ ಮಾದರಿಯಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ.

ಅತ್ಯಾಕರ್ಷವಾಗಿ ಕಂಗೊಳಿಸುತ್ತಿರುವ ಮುಖ್ಯದ್ವಾರ

ಮಂಟಪದ ಬಲಬದಿಯಲ್ಲಿ ಪಂಡರಾಪುರ ಶ್ರೀ ವಿಠೋಭ ರುಕುಮಾಯಿ, ಎಡ ಬದಿಯಲ್ಲಿ ಕ್ಷೇತ್ರ ಮಾತೆ ಶ್ರೀ ಮಹಾಲಕ್ಷ್ಮೀ ದೇವರಿಗೆ ವಿಶೇಷ ಮಂಟಪ ರಚಿಸಲಾಗಿದೆ. ಶಂಕರ್‌ ಆರ್ಟ್ಸ್ ಉದ್ಯಾವರ ಕಲಾವಿದರ ಕೈಚಳಕದ ಮೂಲಕ ದಸರಾ ಮಂಟಪದ ಮುಖ್ಯದ್ವಾರವನ್ನೂ ಅತ್ಯಾಕರ್ಷವಾಗಿ ನಿರ್ಮಿಸಲಾಗಿದ್ದು, 80 ಅಡಿ ಉದ್ದ 24 ಅಡಿ ಎತ್ತರದಲ್ಲಿ ಬಂಗಾರದ ಬಣ್ಣ ಮತ್ತು ಸ್ಟೋನ್ ಕಲ್ಲುಗಳ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು, ಇದು ಎಲ್ಲರನ್ನು ಆಕರ್ಷಿಸುವಂತಿದೆ.

Ads on article

Advertise in articles 1

advertising articles 2

Advertise under the article