'ಉಡುಪಿ ಉಚ್ಚಿಲ ದಸರಾ'ದಲ್ಲಿ ರಂಗೋಲಿ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ; ಗಮನ ಸೆಳೆದ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮ

'ಉಡುಪಿ ಉಚ್ಚಿಲ ದಸರಾ'ದಲ್ಲಿ ರಂಗೋಲಿ ಸ್ಪರ್ಧೆ; ವಿಜೇತರಿಗೆ ಬಹುಮಾನ ವಿತರಣೆ; ಗಮನ ಸೆಳೆದ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮ

Photo: Sachin Uchila

ಉಚ್ಚಿಲ: ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲದಲ್ಲಿ ನಡೆಯುತ್ತಿರುವ 'ಉಡುಪಿ ಉಚ್ಚಿಲ ದಸರಾ' ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಜೊತೆ ಇಂದು ಪುರುಷರು ಹಾಗು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.



ಇಲ್ಲಿನ ಮೊಗವೀರ ಭವನದಲ್ಲಿ ಪುರುಷ ಹಾಗು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ರಂಗೋಲಿ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪ್ರಮೀಳಾ ಶೆಟ್ಟಿ ಬೆಳ್ಮಣ್, ದ್ವಿತೀಯ ಬಹುಮಾನ-ವಿದ್ಯಾ ವಿಶ್ವೇಶ್, ತೃತೀಯ ಬಹುಮಾನ- ಮಂಗಳ ಸಾಲ್ಯಾನ್ ನಿಟ್ಟೂರು ಪಡೆದರು.

ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನ-ತಿಲಕ್ ಪುತ್ರನ್ ಎರ್ಮಾಳ್ ಬಡಾ, ದ್ವಿತೀಯ ಬಹುಮಾನ-ಕಿರಣ್ ಕುಮಾರ್ ಕುರ್ಕಾಲು, ತೃತೀಯ ಬಹುಮಾನ-ಅತುಲ್ ಮಂಗಳೂರು ಅವರು ಪಡೆದರು.








ಈ ವಿಜೇತರಿಗೆ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗಣ್ಯರಾದ ಹೈದರಾಬಾದಿನಲ್ಲಿ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಮುಂಬೈಯ ದಿವ್ಯಾ ಶಿಪ್ಪಿಂಗ್ ಫಾರ್ವರ್ಡಿಂಗ್ ಕಂ. ಪ್ರೈ. ಲಿನ ಆಡಳಿತ ನಿರ್ದೇಶಕ ವೇದಪ್ರಕಾಶ್ ಶ್ರೀಯಾನ್ ಹಾಗು ಅವರ ಪತ್ನಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ.ಜಿ. ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಬಹುಮಾನ ವಿತರಿಸಿದರು. 

ಈ ವೇಳೆ ಗುಂಡು ಬಿ.ಅಮೀನ್, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ  ಗಿರಿಧರ ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಸತೀಶ್ ಕುಂದರ್ ಮಲ್ಪೆ, ಉಷಾ ರಾಣಿ, ಸುಗುಣ ಕರ್ಕೇರ, ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳ್, ಯತೀಶ್ ಕಿದಿಯೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್‌ ಪಡುಕರೆ ನಡೆಸಿಕೊಟ್ಟರು.

ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ 

ಬೆಳಗ್ಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ಷೇತ್ರಾಡಳಿದ ಸಮಿತಿಯ ಕಾರ್ಯದರ್ಶಿ ನಾರಾಯಣ ಸಿ.ಕರ್ಕೇರ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಂಗಳೂರು ಮಂದಾರಬೈಲು ದುರ್ಗಾಪರಮೇಶ್ವರಿ ವೆಂಕಟರಮಣ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. 

ಬಳಿಕ ಉಡುಪಿಯ 'ಸ್ವರಾಂಜಲಿ ಮ್ಯೂಸಿಕ್' ತಂಡದ ಸ್ವಪ್ನರಾಜ್ ಚಿಟ್ಟಾಡಿ ಮತ್ತು ಬಳಗದವರಿಂದ 'ಭಕ್ತಿ ಗೀತಾಂಜಲಿ' ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿವಿಧ ಮೊಗವೀರ ಮಹಿಳಾ ಸಂಘಟನೆಗಳ ಸದಸ್ಯರಿಂದ ಹಲವು ನೃತ್ಯ ಕಾರ್ಯಕ್ರಮಗಳು ಜನರನ್ನು ರಂಜಿಸಿದವು.

ಇದಕ್ಕೂ ಮೊದಲು ನಿತ್ಯ ಚಂಡಿಕಾ ಹೋಮ, ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀ ಕುಮಾರಿ ಕಟ್ಟೋಕ್ತ ಪೂಜೆ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರಗಿದವು. 

Ads on article

Advertise in articles 1

advertising articles 2

Advertise under the article