ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಬೆಳೆ-ವಿಮೆ ಯೋಜನೆಯ ಗಂಭೀರ ಸಮಸ್ಯೆಗಳನ್ನು ಬಿಚ್ಚಿಟ್ಟ ಸಚಿವ ಈಶ್ವರ್ ಖಂಡ್ರೆ!
ಬೆಳಗಾವಿ(ಸುವರ್ಣ ವಿಧಾನ ಸೌಧ): ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ವಿಧಾನ ಸಭೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಬೆಳೆ ವಿಮೆ ಯೋಜನೆಯ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಗಂಭೀರ ಸಮಸ್ಯೆಗಳ ಸುತ್ತ ಬೆಳಕು ಚೆಲ್ಲಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಚರ್ಚೆಯ ವೇಳೆ ಸಚಿವ ಈಶ್ವರ್ ಖಂಡ್ರೆಯವರು ಮಧ್ಯಪ್ರವೇಶಿಸಿ ಮಾತನಾಡಿ, 2016-17ರಿಂದ ಜಾರಿಗೆ ಬಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಬೆಳೆ ವಿಮೆ ಯೋಜನೆಯಲ್ಲಿರುವ ಗಂಭೀರ ಸಮಸ್ಯೆಗಳನ್ನು ಮಂಡಿಸಿದರು.
🔹 ಕಳೆದ ಹಲವು ವರ್ಷಗಳಿಂದ PMFBY ಬೆಳೆ ವಿಮೆ ಯೋಜನೆಯಿಂದ ಖಾಸಗಿ ವಿಮಾ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಲಾಭವಾಗುತ್ತಿದೆ. ಆದರೆ ರೈತರಿಗೆ ಯೋಗ್ಯ ಪರಿಹಾರ ಸಿಗುತ್ತಿಲ್ಲ.
🔹 ಮಳೆ–ಪ್ರವಾಹದಿಂದ ಹಾನಿಯಾದ ಬೆಳೆಗಳ ಮಾಹಿತಿ 3 ದಿನಗಳಲ್ಲಿ ವೆಬ್‌ಲಿಂಕ್/ಫೋನ್ ಮೂಲಕ ನೀಡಬೇಕೆಂಬ ಷರತ್ತು ಇದ್ದರೂ, ಬಹುತೇಕ ಖಾಸಗಿ ಕಂಪನಿಗಳ ವ್ಯವಸ್ಥೆಯೇ ಕಾರ್ಯನಿರ್ವಹಿಸುವುದಿಲ್ಲ.
🔹 ಬೆಳೆ ಕಟಾವು ಪ್ರಯೋಗ, ಋತುಮಾನದ ಮಧ್ಯಕಾಲೀನ ವೈಪರೀತ್ಯ (Mid-season adversity) ಮೊದಲಾದ ಅಂಶಗಳನ್ನು ವೈಜ್ಞಾನಿಕವಾಗಿ ನಿಗದಿ ಮಾಡದೇ, ರೈತರಿಗೆ ಅನ್ಯಾಯವಾಗುತ್ತಿದೆ.
🔹 ಕೇಂದ್ರ ಸರ್ಕಾರ ನೀಡಿರುವ PMFBY ಬೆಳೆ ವಿಮೆ ಮಾರ್ಗಸೂಚಿಗಳಲ್ಲಿ ಅನೇಕ ನ್ಯೂನತೆಗಳಿದ್ದು, ತಿದ್ದುಪಡಿ ಅಗತ್ಯವಿದೆ. ಕೃಷಿ ಸಚಿವರು ಕೇಂದ್ರಕ್ಕೆ ಬದಲಾವಣೆ ಪ್ರಸ್ತಾಪ ಸಲ್ಲಿಸಿದ್ದರೂ, ಈವರೆಗೆ ಯಾವುದೇ ಪರಿಷ್ಕರಣೆ ಆಗಿಲ್ಲ.
ಇಂದಿನ ಪರಿಸ್ಥಿತಿಯಲ್ಲಿ ಖಾಸಗಿ ಕಂಪನಿಗಳು ರಾಜ್ಯದ ಜಿಲ್ಲೆಗಳನ್ನು ಹಂಚಿಕೊಂಡು ಟೆಂಡರ್ ಮೂಲಕ ಲಾಭದಾಯಕವಾದ ಭಾಗವನ್ನು ಆಯ್ಕೆ ಮಾಡಿಕೊಂಡು ಲಾಭ ಪಡೆಯುತ್ತಿದ್ದಾರೆ.
2016ರ ಮೊದಲು ಭಾರತೀಯ ಕೃಷಿ ನಿಗಮ ವಿಮೆ ಜಾರಿ ಮಾಡುತ್ತಿದ್ದಾಗ, ನಷ್ಟವನ್ನು ಕೇಂದ್ರ–ರಾಜ್ಯ ಸರ್ಕಾರಗಳು ಭರಿಸುತ್ತಿದ್ದವು. ಆದರೆ ಈಗ ಖಾಸಗಿ ಕಂಪನಿಗಳಿಗಷ್ಟೇ ಲಾಭ, ನಷ್ಟ ನಿಗಮಕ್ಕೇ!
➡️ರೈತರಿಗೆ ನಿಜವಾದ ರಕ್ಷಣೆಯನ್ನೂ, ನ್ಯಾಯಸಮ್ಮತ ಪರಿಹಾರವನ್ನೂ ಕೊಡಬೇಕಾದರೆ, ಇಡೀ PMFBY ಬೆಳೆ ವಿಮೆ ನೀತಿಯನ್ನು ಸಮಗ್ರವಾಗಿ ಪರಿಷ್ಕರಿಸುವುದು ತುರ್ತು ಅಗತ್ಯವಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.