ಬೀದರ್; ಮಾಂಜಾ ದಾರಕ್ಕೆ ಬಲಿಯಾದ ವ್ಯಕ್ತಿಯ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಸಚಿವ ಈಶ್ವರ್ ಖಂಡ್ರೆ; ವೈಯಕ್ತಿಕವಾಗಿ ಧನ ಸಹಾಯದ ಜೊತೆ ಸರಕಾರದಿಂದಲೂ ಸೂಕ್ತ ಪರಿಹಾರದ ಭರವಸೆ
ಬೀದರ್: ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಗಾಳಿಪಟ ಹಾರಿಸುವ ಮಾಂಜಾ ದಾರಕ್ಕೆ ಸಿಲುಕಿ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿಯ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗಾಳಿಪಟ ಹಾರಿಸುವ ವೇಳೆ ನಿಷೇಧಿತ ಚೀನಾ ತಯಾರಿಕೆಯ ಮಾಂಜಾ ದಾರ ಬಳಕೆಯಿಂದ ರಾಷ್ಟ್ರೀಯ ಹೆದ್ದಾರಿ–65ರ ನಿರ್ಣಾ ಕ್ರಾಸ್ ಸಮೀಪ ದ್ವಿಚಕ್ರ ವಾಹನ ಸವಾರ ಸಂಜುಕುಮಾರ್ ಗುಂಡಪ್ಪ ಹೊಸಮನಿ (ನಿವಾಸಿ: ಬಂಬುಳಗಿ ಗ್ರಾಮ, ಬೀದರ್ ತಾಲ್ಲೂಕು) ಅವರು ದಾರುಣವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವುಂಟುಮಾಡಿದೆ ಎಂದು ಖಂಡ್ರೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಖಂಡ್ರೆ, ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಜೊತೆಗೆ ಸರ್ಕಾರದ ಕಡೆಯಿಂದಲೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ನಿಷೇಧಿತ ಚೀನಾ ಮಾಂಜಾ ದಾರ ಮಾನವ ಜೀವಕ್ಕೆ ಅತ್ಯಂತ ಅಪಾಯಕಾರಿ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಜನಜಾಗೃತಿ ಹಾಗೂ ಕಟ್ಟುನಿಟ್ಟಿನ ಕ್ರಮ ಅಗತ್ಯ. ಸಾರ್ವಜನಿಕರು ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.