ಉಡುಪಿ: ಇಂದ್ರಾಳಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀ ಆಂಜನೇಯ ದೇವರ ಗುಡಿ ಹಾಗೂ ನಾಗದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಇದೇ ಎ. 3ರಿಂದ 7ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಇಂದ್ರಾಳಿ ಆಂಜನೇಯ ದೇವರ ದೇವಸ್ಥಾನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ. 3ರಂದು ಸಂಜೆ 6ರಿಂದ ವಾಸ್ತು ಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎ. 4 ರಂದು ಬೆಳಿಗ್ಗೆ 6.48ರಿಂದ ಅಷ್ಟಬಂಧ ಸಹಿತ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠಾ ಕಾರ್ಯಕ್ರಮಗಳು ಆರಂಭವಾಗಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ಎ. 5ರಂದು ಶ್ರೀ ಮುಖ್ಯಪ್ರಾಣ ದೇವರಿಗೆ ಬ್ರಹ್ಮಕುಂಬಾಭಿಷೇಕ, ಪ್ರಸನ್ನ ಪೂಜಾದಿಗಳು, ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ಜರುಗಲಿದೆ. ಆ ದಿನ ಸಂಜೆ 7ರಿಂದ ಮಹಾರಂಗ ಪೂಜೆ ಜರುಗಲಿದೆ ಎಂದರು.
ಎ.6ರಂದು ಸಂಜೆ 6ರಿಂದ ನಾಗಗುಡಿಯಲ್ಲಿ ವಾಸ್ತು, ರಕ್ಷಾ ಹೋಮ, ಬಿಂಬಾಧಿವಾಸ ಪೂಜಾದಿಗಳು ನೆರವೇರಲಿದೆ. ಎ. 7 ರಂದು ನಾಗದೇವರ ಪುನಃ ಪ್ರತಿಷ್ಠಾದಿಗಳು ಆಶ್ಲೇಷ ಬಲಿ, ಮಹಾ ಪೂಜೆ, ವಟು ಆರಾಧನೆ, ಅನ್ನಸಂತರ್ಪಣೆ, ಪ್ರಸಾದ ವಿತರಣೆ ನೆರವೇರಲಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಎ. 4ರಂದು ರಾತ್ರಿ 7.30ರಿಂದ ಕಲಾಮಯಂ ಉಡುಪಿ ಅವರಿಂದ ಜಾನಪದ ಕಲರವ, ಎ.5ರಂದು ರಾತ್ರಿ 7.30ರಿಂದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಅವರ ಸಾರಥ್ಯದಲ್ಲಿ ಯಕ್ಷಗಾನ ಛಾಯಾನಂದನ, ಎ.6ರಂದು ಸಂಜೆ 7.30ರಿಂದ ಮಣಿಪಾಲ ಗುರುವಸಂತಿ ಸಾಂಸ್ಕೃತಿಕ ವೇದಿಕೆಯಿಂದ ಪೌರಾಣಿಕ ನಾಟಕ ಬಿಕ್ರಮ ಬಜರಂಗಿ, ಎ.7ರಂದು ಸಂಜೆ 7.30ರಿಂದ ಶ್ರೀಯಕ್ಷನಿಧಿ ಮೂಡುಬಿದರೆ ಅವರಿಂದ ಯಕ್ಷಗಾನ - ವೀರಮಣಿ ಕಾಳಗ ಜೊತೆಗೆ 5 ದಿನಗಳಲ್ಲಿ ನೃತ್ಯ ವೈಭವ, ಭಜನಾಮೃತಂ, ಭಕ್ತಿ ಸಂಗೀತ ತಾಳಮದ್ದಲೆ ಕೂಟ, ಭಕ್ತಿ ಗಾನ, ನೃತ್ಯಾಮೃತಂ, ನಿರಂತರ ಭಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮುಖ್ಯಪ್ರಾಣ ದೇವರ ಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭೂಪತಿ ಶೆಟ್ಟಿ ಇಂದ್ರಾಳಿ, ಇಂದ್ರಾಳಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ ಕುಶಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷ ಸಾಧು ಶೆಟ್ಟಿ, ಮಾಧ್ಯಮ ಮತ್ತು ಜಾಹಿರಾತು ಸಮಿತಿ ಸಂಚಾಲಕ ರವಿ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ನಾಯಕ್, ಕೋಶಾಧಿಕಾರಿ ಪಾಂಡುರಂಗ ನಾಯಕ್ ಮಂಚಿ ಉಪಸ್ಥಿತರಿದ್ದರು.
