ಬೆಂಗಳೂರು: ರಾಜ್ಯದಲ್ಲಿ ಒಂದು ಕುಟುಂಬಕ್ಕಾಗಿ ಇಡೀ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಳ್ಳುತ್ತಿರುವ ಕಾಂಗ್ರೆಸ್ ನಡೆ ಸ್ವೀಕಾರಾರ್ಹವಲ್ಲ ಎಂದು ಜಮೀಯತ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಹೇಳಿದ್ದಾರೆ.
ಗುರುವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಉಲಮಾ ಎ ಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುಚಟಿಕೆ ಆರೋಪದ ಮೇಲೆ ಮುಸ್ಲಿಮ್ ನಾಯಕರ ವಿರುದ್ಧ ನಿಯಮಬಾಹಿರವಾಗಿ ಕಾಂಗ್ರೆಸ್ ಪಕ್ಷ ಕ್ರಮ ಕೈಗೊಳ್ಳುತ್ತಿದೆ. ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಶೋಕಾಸ್ ನೋಟಿಸ್ ನೀಡಿ, ಅವರಿಂದ ಸ್ಪಷ್ಟೀಕರಣ ಪಡೆಯಬೇಕಿತ್ತು ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮೇಲೆ ಒತ್ತಡ ಹೇರಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಪಡೆದರು. ಈಗ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದ್ದಾರೆ. ಬಾಗಲಕೋಟೆ ಉಪ ಚುನಾವಣೆಯಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ನಾಯಕರಾಗಿರುವ ನಸೀರ್ ಅಹ್ಮದ್ ಅವರಿಗೆ ನೀಡಿದ್ದರು. ಆದರೆ, ಇದೀಗ ಯಾವ ಕಾರಣಕ್ಕಾಗಿ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆ ಯಿಂದ ವಜಾ ಮಾಡಿದ್ದಾರೆ ಎಂದು ಅರ್ಥ ಆಗುತ್ತಿಲ್ಲ ಎಂದು ಇಫ್ತಿಕಾರ್ ಅಹ್ಮದ್ ಖಾಸ್ಮಿ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರ ಪರ ಮತಯಾಚನೆ ಮಾಡಿದ ಶಾಮನೂರು ಶಿವಶಂಕರಪ್ಪ ವಿರುದ್ಧ ಕಾಂಗ್ರೆಸ್ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಅದು ಪಕ್ಷ ವಿರೋಧಿ ಚಟುವಟಿಕೆ ಆಗಿರಲಿಲ್ಲವೇ? ಕೇವಲ ಸಂಶಯದ ಆಧಾರದ ಮೇಲೆ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹ್ಮದ್ ವಿರುದ್ಧ ನಿಯಮಬಾಹಿರವಾಗಿ ಕ್ರಮ ಕೈಗೊಂಡಿದ್ದು ಸರಿಯಲ್ಲ ಎಂದು ಅವರು ಹೇಳಿದರು.
2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ನಾವು ಕೇಳಿದ್ದೇವೆ. ಆದರೆ, ಹಾಲಿ ಕಾಂಗ್ರೆಸ್ ಶಾಸಕರಿದ್ದ ಕಾರಣ ಕೊಟ್ಟಿರಲಿಲ್ಲ. ಈ ಉಪ ಚುನಾವಣೆಯಲ್ಲಾದರೂ ಟಿಕೆಟ್ ಕೊಡಿ ಎಂದು ಪಕ್ಷದ ನಾಯಕರು, ಉಲಮಾ ಕೇಳಿದರು ಕೊಟ್ಟಿಲ್ಲ. ಬಾಗಲಕೋಟೆಯಲ್ಲಿ ಎಚ್.ವೈ.ಮೇಟಿ ಅವರ ಮಗನಿಗೆ ಕೊಟ್ಟರು. ಆದರೆ, ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಅವರ ಮೊಮ್ಮಗನಿಗೆ ಟಿಕೆಟ್ ಕೊಟ್ಟಿದ್ದು ತಪ್ಪು ಎಂದು ಅವರು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರ ಮಗ ಮಲ್ಲಿಕಾರ್ಜುನ್ ಸಚಿವ, ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಸಂಸದೆಯಾಗಿದ್ದಾರೆ. ನಮ್ಮ ಸಮುದಾಯದ 80 ಸಾವಿರ ಮತಗಳಿದ್ದರೂ ನಮಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದರು ಎಂದು ಇಫ್ತಿಕಾರ್ ಅಹ್ಮದ್ ಖಾಸ್ಮಿ ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಗಿಂತಲೂ ದೊಡ್ಡ ಹೈಕಮಾಂಡ್ ಜನತೆ. ಅವರು ಬಯಸಿದರೆ ಮಾತ್ರ ನಿಮ್ಮ ಸರಕಾರ ರಚನೆಯಾಗುತ್ತದೆ. ಮುಸ್ಲಿಮರು ತಮ್ಮ ಹಕ್ಕು ಕೇಳಿದರೆ ಒಂದು ಕುಟುಂಬಕ್ಕಾಗಿ ಇಡೀ ಅಹಿಂದ ಸಮುದಾಯದ ವಿರೋಧ ಕಟ್ಟಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಜನತಾ ನ್ಯಾಯಾಲಯ ಎಲ್ಲವನ್ನೂ ನೋಡುತ್ತಿದೆ. ಯಾವ ಸಮುದಾಯ ಶೇ.90ರಷ್ಟು ಮತ ನಿಮಗೆ ನೀಡಿ ಅಧಿಕಾರಕ್ಕೆ ತಂದು ಕೂರಿಸಿತೋ ಆ ಸಮುದಾಯ ತನ್ನ ಹಕ್ಕು ಕೇಳಬಾರದೇ ಎಂದು ಅವರು ಪ್ರಶ್ನಿಸಿದರು.
ಮೌಲಾನಾ ಖಾರಿ ಝುಲ್ಫಿಕರ್ ಅಹ್ಮದ್ ನೂರಿ ಮಾತನಾಡಿ, ದಾವಣಗೆರೆಯಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಭರವಸೆ ನೀಡಿದ್ದರು. ಆದರೆ, ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಸೀರ್ ಅಹ್ಮದ್ ಅವರಿಗೆ ಬಾಗಲಕೋಟೆ ಕ್ಷೇತ್ರದ ಜವಾಬ್ದಾರಿ ನೀಡಿದ್ದರು. ಆದರೆ ಯಾಕೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಮುಸ್ಲಿಮರ ಅಸಮಾಧಾನ ಕಾಂಗ್ರೆಸ್ ಪಾಲಿಗೆ ಒಳ್ಳೆಯದಲ್ಲ. ಇದೇ ರೀತಿ ಪರಿಸ್ಥಿತಿ ಇದ್ದರೆ ಭವಿಷ್ಯದಲ್ಲಿ ಕಾಂಗ್ರೆಸ್ ಪಾಲಿಗೆ ಒಳ್ಳೆಯದಲ್ಲ.
ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹ್ಮದ್ ಅವರ ಮನವೊಲಿಕೆ ಮಾಡಬೇಕು ಎಂದು ಅವರು ಹೇಳಿದರು.
ಮೌಲಾನಾ ಝೈನುಲ್ ಆಬಿದಿನ್ ಮಾತನಾಡಿ, ಗುಜರಾತ್, ದಿಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಹೇಗಿದೆ? ಅಲ್ಪಸಂಖ್ಯಾತರ ಕುರಿತು ತನ್ನ ವರ್ತನೆಯನ್ನು ಸರಿಪಡಿಸಿಕೊಳ್ಳದಿದ್ದರೆ ಕರ್ನಾಟಕದಲ್ಲಿಯೂ ಅದೇ ರೀತಿ ಆಗಬಹುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮೌಲಾನಾ ಸೈಯದ್ ಆಸಿಮ್ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
