ಕೊಡವೂರು ದೇವಸ್ಥಾನದಲ್ಲಿ ಮೇ 14ರಿಂದ ಮಹಾರುದ್ರಯಾಗ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ಲೋಕ ಕಲ್ಯಾಣಾರ್ಥವಾಗಿ ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಮಹಾರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಸೇವಾಕರ್ತರಾಗಿರುವ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಈ ಕುರಿತು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಮಹಾರುದ್ರ ಯಾಗವನ್ನು ನಾಡ ಹಬ್ಬದಂತೆ ಅಚರಿಸಲು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ ,ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮೇ 10ರಿಂದ ಮೇ 20ರವರೆಗೆ ಮನೋರಂಜನೆಗಾಗಿ ಜಾಯಿಂಟ್ ವಿಲ್, ಮೋಜು ಮಸ್ತಿಗಳು, ಆಟಿಕೆಗಳು, ಆಟೋಟ ಪರಿಕರಗಳು, ಬೃಹತ್ತ್ ವಸ್ತು ಪ್ರದರ್ಶನ ಮಾರಾಟ ಮಳಿಗೆಗಳು ಮನರಂಜಿಸಲಿವೆ. ಮೇ 14ರಂದು ಮಹಾರುದ್ರಾ ಯಾಗ ಪೂರ್ವ ಭಾವಿಯಾಗಿ ಮಲ್ಪೆಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ 15ಕ್ಕೆ ಮಹಾರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿರುವುದು. ಅದೇ ದಿನ ಸಂಜೆ ಧಾರ್ಮಿಕ ಕಾರ್ಯಕ್ರಮ ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

ಮೇ 16ರಂದು ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ಮೇ 17ರಂದು  ಮಲ್ಪೆ ಬೀಚ್ ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟ ಸ್ಪರ್ಧೆಗಳು ನಡೆಯಲಿದ್ದು, ಅಂದು ಸಂಜೆ 6 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯ ಅತಿಥಿಗಳಠಗಿ ಭಾಗವಹಿಸಲಿದ್ದಾರೆ. ರಾತ್ರಿ 8ಕ್ಕೆ ದಕ್ಷಿಣ ಭಾರತದ ಖ್ಯಾತ ಹಾಡುಗಾರ್ತಿ ಮಂಗ್ಲಿ ಅವರು ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುಪಡಿಸಲಿದ್ದಾರೆ. ಮೇ 18 ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇ 19ರಂದು ಮಹಾರುದ್ರ ಯಾಗ ಕೊನೆಯ ದಿನದಂದು ಪೂರ್ಣಾಹುತಿ ನಡೆಯಲಿದೆ. ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಎನ್ನುವ ಕಾರ್ಯಕ್ರಮ ಅಯೋಜಿಸಲಾಗಿದೆ. ಕಾರ್ಯಕ್ರಮ ಪ್ರತಿದಿನ 5 ರಿಂದ 8 ರವರೆಗೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಕೊಡವೂರು, ಪುರೋಹಿತರಾದ ವಾದಿರಾಜ ತಂತ್ರಿ ಪುತ್ತೂರು, ತಾರಾನಾಥ ಪೂಜಾರಿ,ರಮೇಶ್ ತಿಂಗಳಾಯ, ಬಾಲಕೃಷ್ಣ ಕೊಡವೂರು, ನಂದಕಿಶೋರ್, ವಾದಿರಾಜ ಸಾಲಿಯಾನ್, ಡಾ. ವಿಜಯೇಂದ್ರ, ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.