ನಾರಿ ಶಕ್ತಿ ವಂದನ್ ಮಸೂದೆ ವಿರೋಧಿಸುವ ಮೂಲಕ ವಿಪಕ್ಷಗಳಿಂದ ಮಹಿಳಾ ವಿರೋಧಿ ಧೋರಣೆ: ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ

ಉಡುಪಿ: ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಾರಿಗೊಳಿಸಲು ಮುಂದಾಗಿದ್ದ 'ನಾರಿ ಶಕ್ತಿ ವಂದನ್ ಕಾಯ್ದೆಯ ತಿದ್ದುಪಡಿ ಮಸೂದೆ' ಅನ್ನು ವಿಪಕ್ಷಗಳು ವಿರೋಧ ವ್ಯಕ್ತಪಡಿಸುವ ಮೂಲಕ ಮಹಿಳಾ ವಿರೋಧಿ ಧೋರಣೆ ತೋರಿದೆ. ವಿಪಕ್ಷಗಳು ವೈಯಕ್ತಿಕ‌ ದ್ವೇಷದಿಂದ ಯಾರಿಗಾದರೂ ರಾಜಕೀಯ ಲಾಭ ಸಿಗಬಹುದೆಂಬ ದುರಾಲೋಚನೆಯಿಂದ ಮಸೂದೆ ಅಂಗೀಕರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಮಹಿಳೆಯರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡುವ ಮಹತ್ವದ ಮಸೂದೆ ಆಗಿದ್ದು ಇದನ್ನು ಸರ್ವಾನುಮತದಿಂದ ಅಂಗೀಕರಿಸುವ ನಿರೀಕ್ಷೆ ಇತ್ತು. ಆದರೆ ವಿಪಕ್ಷಗಳ ವಿರೋಧದಿಂದ ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಸುವರ್ಣ ಅವಕಾಶ ತಪ್ಪಿಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಕೆಲವು ಕ್ಷೇತ್ರಗಳಲ್ಲಿ 28 ರಿಂದ 33 ಲಕ್ಷ ಜನಸಂಖ್ಯೆ ಇರುವುದರಿಂದ ಜನರನ್ನು ತಲುಪುವುದು ಕಷ್ಟವಾಗುತ್ತಿದೆ. ಆದ್ದರಿಂದ ಕ್ಷೇತ್ರಗಳನ್ನು ಸಣ್ಣದಾಗಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ 33 ಶೇಕಡ ಮಹಿಳಾ ಮೀಸಲಾತಿ ಜಾರಿಗೊಳಿಸುವುದು ಅನಿವಾರ್ಯ ಎಂದರು.

ಕರ್ನಾಟಕದಲ್ಲಿ ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಹೆಚ್ಚುವರಿ ಸ್ಥಾನಗಳ ಅಗತ್ಯವಿದೆ. ಆದರೆ ವಿಪಕ್ಷಗಳು ಎಲ್ಲಾ ಅವಕಾಶಗಳಿಗೂ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಆರೋಪಿಸಿದರು. ಮಸೂದೆ ಜಾರಿಗೆ ಚುನಾವಣೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಮುಂದಿನ ದಿನಗಳಲ್ಲಿ ಈ ಮಸೂದೆ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಮುಖಂಡರಾದ ಶ್ಯಾಮಲಾ ಕುಂದ‌ರ್, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಸಂಧ್ಯಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.